ಬೆಂಗಳೂರು, ಜು 02 (DaijiworldNews/DB): ರಾತ್ರಿ ಮನೆಗೆ ಬಂದಾಗ ತಡವಾಗಿ ಬಾಗಿಲು ತೆರೆದ ಮತ್ತು ಊಟ ಬಡಿಸದ ಕಾರಣಕ್ಕಾಗಿ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಸೂಟ್ಕೇಸ್ನಲ್ಲಿ ತುಂಬಿ ಕ್ವಾರಿಯಲ್ಲಿ ಎಸೆದು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದ ಮಂಜುಳಾ ಕೊಲೆಯಾದವರು. ಮಂಜುಳಾ ಪತಿ ರಾಮುನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪೆನಿ ಉದ್ಯೋಗಿಯಾಗಿರುವ ರಾಮು ಜೂನ್ 11 ರಂದು ಸಿನೆಮಾ ವೀಕ್ಷಿಸಿ ರಾತ್ರಿ ತಡವಾಗಿ ಮನೆಗೆ ಆಗಮಿಸಿದ್ದಾನೆ. ಅಲ್ಲದೆ, ಮನೆಗೆ ಬಂದಾಗ ಮಂಜುಳಾ ಬಾಗಿಲು ತೆಗೆಯಲು ತಡ ಮಾಡಿದ್ದಾಳೆ. ಬಳಿಕ ಪತಿಗೆ ಊಟವನ್ನೂ ಬಡಿಸಿಲ್ಲ. ಇದರಿಂದ ಸಿಟ್ಟಿಗೆದ್ದ ಪತಿ ರಾಮು ಆಕೆಯ ತಲೆಗೆ ಬಲವಾದ ಆಯುಧದಿಂದ ಹೊಡೆದು ಕತ್ತು ಹಿಸುಕಿ ಕೊಲೆಮಾಡಿದ್ದಾನೆ. ಸೂಟ್ಕೇಸ್ನಲ್ಲಿ ಶವವನ್ನು ತುಂಬಿ ಸ್ನೇಹಿತ ಹಾವೇರಿ ಮೂಲದ ಬಸವ ಗೌಡ ಎಂಬಾತನಿಗೆ ಕರೆ ಮಾಡಿ ಬರಲು ಹೇಳಿದ್ದಾನೆ. ಬಳಿಕ ಮರುದಿನ ಇಬ್ಬರೂ ಸೇರಿ ಸೂಟ್ಕೇಸ್ ಸಹಿತ ಶವವನ್ನು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ದು ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿರುವ ದಾಬಸ್ ಪೇಟೆ ಬಳಿ ಕ್ವಾರಿ ಹೊಂಡದಲ್ಲಿ ಬಿಸಾಕಿ ಚೆನ್ನೈಗೆ ಪರಾರಿಯಾಗಿದ್ದಾನೆ. ಸ್ನೇಹಿತ ಆತನ ಊರಿಗೆ ವಾಪಸ್ಸಾಗಿದ್ದ.
ಜೂನ್ 14 ರಂದು ಪೊಲೀಸರಿಗೆ ಸೂಟ್ಕೇಸ್ನಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಹೊರಟಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ನಗರಕ್ಕೆ ವಾಪಸ್ಸಾದ ನಂತರ ಬಾರ್ಗೆ ತೆರಳಿ ಮೊಬೈಲ್ ಸ್ವಿಚ್ ಆನ್ ಮಾಡಿದ್ದ. ಈ ವೇಳೆ ಹುಡುಕಾಟದಲ್ಲಿದ್ದ ಪೊಲೀಸರಿಗೆ ಟವರ್ ಸ್ಥಳದ ಆಧಾರದ ಮೇಲೆ ಆತನ ಇರುವಿಕೆ ಪತ್ತೆಯಾಗಿದೆ. ಬಳಿಕ ಆತ ಇರುವ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲಾಯಿತು.
ಮಂಜುಳಾ ಮೊದಲ ಪತಿ ವಿರೂಪಾಕ್ಷ ಆಕೆಯಿಂದ ಬೇರೆಯಾದ ನಂತರ ಇಬ್ಬರು ಮಕ್ಕಳೊಂದಿಗೆ ಕೊಪ್ಪಳದ ಗಂಗಾವತಿಗೆ ತೆರಳಿದ್ದಳು. ಬಳಿಕ ಪೀಣ್ಯದಲ್ಲಿ ಕೆಲಸಕ್ಕೆ ಸೇರಿದ್ದ ಮಂಜುಳಾಗೆ ಅಲ್ಲಿ ರಾಮು ಪರಿಚಯವಾಗಿದ್ದ. ಆನಂತರ ಇಬ್ಬರೂ ಮದುವೆಯಾಗಿದ್ದರು. ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.