ಇಂಫಾಲ್, ಜು 02 (DaijiworldNews/DB): ಮಣಿಪುರದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂ ಕುಸಿತದಿಂದಾಗಿ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರ ಪೈಕಿ 18 ಮಂದಿ ಯೋಧರು ಸೇರಿದ್ದಾರೆ.
ಮಣಿಪುರದ ನೋನೆ ಜಿಲ್ಲೆಯ ಟುಫುಲ್ ಯಾರ್ಡ್ ನ ರೈಲ್ವೆ ಕಾಮಗಾರಿ ಸ್ಥಳದಲ್ಲಿ ಭೂ ಕುಸಿತ ಸಂಭವಿಸಿತ್ತು. ಹಲವಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಟೆರಿಟೋರಿಯಲ್ ಆರ್ಮಿಯ 13 ಸಿಬಂದಿ ಹಾಗೂ ಐವರು ನಾಗರಿಕರನ್ನು ಈವರೆಗೆ ರಕ್ಷಿಸಲಾಗಿದೆ. ಸುಮಾರು 33 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ ಮತ್ತು ಕೇಂದ್ರ, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ನಿರಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.
ಇನ್ನು ಭೂ ಕುಸಿತಕ್ಕೊಳಗಾದ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಯ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ವಾಲ್ ರೇಡಾರ್ ಬಳಸಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ.