ಬೆಂಗಳೂರು, ಜು 02 (DaijiworldNews/MS): ಇದೇ ಮೊದಲ ಬಾರಿಗೆ ಕೆಎಂಎಫ್ನ ನಂದಿನಿ ಲಸ್ಸಿ ಉತ್ಪನ್ನಗಳು ವಿಮಾನ, ರೈಲಿನಲ್ಲೂ ನಂದಿನಿ ಲಸ್ಸಿ ಉತ್ಪನ್ನಗಳು ದೊರಕಲಿದೆ.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ಹಾಸನ ಹಾಲು ಒಕ್ಕೂಟದ ವತಿಯಿಂದ ಪ್ರಥಮ ಬಾರಿಗೆ 'ಫ್ಲೈಟ್ ಕೇಟರಿಂಗ್'ಗೆ ನಂದಿನಿ ಗುಡ್ಲೈಫ್ ಸುವಾಸಿತ ಹಾಲು, ಮಜ್ಜಿಗೆ, ಲಸ್ಸಿ ಮತ್ತು ಮಿಲ್ಕ್ ಶೇಕ್ ಪೆಟ್ ಬಾಟಲ್ ಸರಬರಾಜು ಮಾಡಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ರೈಲು ಹಾಗೂ ವಿಮಾನದಲ್ಲಿ ನಂದಿನಿ ಉತ್ಪನ್ನಗಳು ಲಭಿಸಲಿದೆ.
ಪೆಟ್ ಬಾಟಲ್ ಹಾಲಿನ ಉತ್ಪನ್ನಗಳನ್ನೊಳಗೊಂಡ ವಾಹನಕ್ಕೆ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಅವರು ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಸ್ತಾರ ಮತ್ತು ಏರ್ ಇಂಡಿಯಾ ಸಂಸ್ಥೆಯ ವಿಮಾನಗಳ ಫ್ಲೈಟ್ ಕೇಟರಿಂಗ್ನಲ್ಲಿ ನಂದಿನಿಯ ಪೆಟ್ ಬಾಟಲ್ ಹಾಲಿನ ಉತ್ಪನ್ನಗಳು ದೊರೆಯಲಿವೆ. ಇದರೊಂದಿಗೆ ಹಾಸನ ಹಾಲು ಒಕ್ಕೂಟದಿಂದ ಭಾರತೀಯ ರೈಲ್ವೆಗೆ ಸುವಾಸಿತ ಹಾಲಿನ ಉತ್ಪನ್ನವನ್ನು ಪೂರೈಸುವತ್ತ ಮುಂದಡಿ ಇಟ್ಟಿದೆ. ಪೆಟ್ ಬಾಟಲ್ ನ ವಾಹನಗಳು ಮುಂಬಯಿ, ಚೆನ್ನೈ, ಪುಣೆ ಮತ್ತು ಬೆಂಗಳೂರು ರೈಲ್ವೆ ಕೇಟರಿಂಗ್ ಡಿಪೋ ತಲುಪಲಿವೆ. ನಂತರ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿವೆ.
ಭಾರತೀಯ ರೈಲ್ವೆ ಮತ್ತು ವಿಮಾನಯಾನ ಸಂಸ್ಥೆಯ ಅಧಿಕೃತ ಕೇಟರರ್ಸ್ ಸಂಪರ್ಕಿಸಿ ನಂದಿನಿ ಗುಡ್ಲೈಫ್ನ ಸುವಾಸಿತ ಹಾಲು ಮತ್ತು ಮಿಲ್ಕ್ ಶೇಕ್ ಸರಬರಾಜು ಮಾಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ತಿಂಗಳಿಗೆ 3 ಲಕ್ಷ ಲೀಟರ್ ಒದಗಿಸಲಾಗುವುದು. ಬೇಸಿಗೆ ಅವಧಿಯಲ್ಲಿ5ರಿಂದ 6 ಲಕ್ಷ ಲೀಟರ್ಗೆ ಬೇಡಿಕೆ ಬರುವ ಸಾಧ್ಯತೆಗಳಿವೆ ಎಂದು ಕೆಎಂಎಫ್ ತಿಳಿಸಿದೆ.