ವಯನಾಡ್, ಜು 01 (DaijiworldNews/DB): ದೇಶದಲ್ಲಿ ದ್ವೇಷ, ಕೋಪ ಸೃಷ್ಟಿಗೆ ಕೇವಲ ಒಬ್ಬ ವ್ಯಕ್ತಿ ಕಾರಣವಲ್ಲ. ಕೇಂದ್ರ ಸರ್ಕಾರವೇ ಇದನ್ನು ಸೃಷ್ಟಿ ಮಾಡುತ್ತಿದೆ ಎಂದು ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ದೇಶದ ಜನತೆಯ ಕ್ಷಮೆ ಯಾಚಿಸಬೇಕೆಂಬುದಾಗಿ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದರ ಬಗ್ಗೆ ಕೇರಳದ ವಯನಾಡ್ನಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಆಡಳಿತರೂಢ ಸರ್ಕಾರದಿಂದಲೇ ದೇಶದಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಪ್ರಧಾನಿ, ಗೃಹ ಸಚಿವರು, ಬಿಜೆಪಿ ಮತ್ತು ಆರೆಸ್ಸೆಸ್ ಇಂತಹ ಘಟನೆ ಸೃಷ್ಟಿಯಾಗಲು ಕಾರಣ ಎಂದು ವಾಗ್ದಾಳಿ ನಡೆಸಿದರು.
ವಯನಾಡ್ನಲ್ಲಿರುವ ತಮ್ಮ ಸಂಸದರ ಕಚೇರಿ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಕೇವಲ ನನ್ನ ಕಚೇರಿಯಲ್ಲ. ಇಡೀ ವಯನಾಡ್ನ ಜನರಿಗೆ ಸೇರಿದ್ದಾಗಿದೆ. ಅಂತಹ ಕಚೇರಿ ಮೇಲೆ ದಾಳಿ ಮಾಡುವುದು ಮೂರ್ಖತನ ಎಂದರು.
ಪರಿಸರ ಸೂಕ್ಷ್ಮ ವಲಯ (ಇಎಸ್ಜೆಡ್) ಕುರಿತ ಸುಪ್ರೀಂ ಕೋರ್ಟ್ ಆದೇಶದಲ್ಲಿ ಸಂಸದರು ಮಧ್ಯಪ್ರವೇಶಿಸಿಲ್ಲವೆಂದು ಆರೋಪಿಸಿ ಸಿಪಿಐ(ಎಂ) ಯುವ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಜೂನ್ 24 ರಂದು ಸಂಸದರ ಕಚೇರಿಗೆ ಮೆರವಣಿಗೆ ನಡೆಸಿ ವಯನಾಡಿನಲ್ಲಿ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿತ್ತು.