ತುಮಕೂರು, ಜು 01 (DaijiworldNews/DB): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಇದೀಗ ಕ್ಷಮೆ ಕೇಳಿದ್ದಾರೆ.
ನನ್ನ ಹೇಳಿಕೆಯಿಂದ ದೇವೇಗೌಡರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ. ಈ ನಾಡಿಗೆ ಅವರ ಕೊಡುಗೆ ಸ್ಮರಣೀಯ. ಅವರ ಕೊಡುಗೆಗಳನ್ನು ಸ್ಮರಿಸುವ ನಿಯತ್ತು ನನಗಿದೆ. ಇಂದು ಅಥವಾ ನಾಳೆ ದೇವೇಗೌಡರನ್ನು ಭೇಟಿಯಾಗಿ ಮಾತನಾಡುವೆ ಎಂದಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈಗ ಇಬ್ಬರ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಹೇಳಿಕೆ ನೀಡಿ ರಾಜಣ್ಣ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಸ್ವತಃ ಕಾಂಗ್ರೆಸ್ ನಾಯಕರೇ ರಾಜಣ್ಣ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜಣ್ಣ ಹೇಳಿಕೆಯನ್ನು ನವದೆಹಲಿಯಲ್ಲಿ ಖಂಡಿಸಿದ ಡಿ.ಕೆ. ಶಿವಕುಮಾರ್, ರಾಜಣ್ಣ ಅವರ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಅವರು ದೇವೇಗೌಡರಲ್ಲಿ ಕ್ಷಮೆ ಕೇಳಬೇಕು. ದೇವೇಗೌಡರಿಗೆ ದೇವರು ಇನ್ನಷ್ಟು ಆಯಸ್ಸು, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದರು.
ಇನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ ರಾಜಣ್ಣ ಅವರ ದುರಹಂಕಾರಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ರಾಜಣ್ಣ ದೇವೇಗೌಡರ ನಿವಾಸಕ್ಕೆ ತೆರಳಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.