ಉದಯಪುರ, ಜು 01 (DaijiworldNews/MS): ರಾಜಸ್ತಾನದ ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಿಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ನಂಟು ಹೊಂದಿರುವ ವಿಚಾರದ ಬೆನ್ನಲ್ಲೇ ಮತ್ತೊಂದು ಅಘಾತಕಾರಿ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಕೊಲೆ ಆರೋಪಿ ರಿಯಾಜ್ ಅಖ್ತರಿ ತನ್ನ ಬೈಕ್ ಗೆ " 2611 "ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ ಎಂದು ತಿಳಿದುಬಂದಿದೆ.
2008 ರಲ್ಲಿ 26/11 ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್- ಎ- ತೊಯ್ಬಾ ಉಗ್ರರು ದಾಳಿ ನಡೆಸಿದ ಭೀಕರ ದಿನ. ಸಮುದ್ರ ಮಾರ್ಗದಿಂದ ಬಂದ ಈ ದುಷ್ಕರ್ಮಿಗಳು ತಾಜ್ ಮಹಲ್ ಹೊಟೇಲ್, ಒಬೇರಾಯ್ ಹೊಟೇಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ ಹೌಸ್, ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್ ಮೊದಲಾದ ಕಡೆ ಮನಬಂದಂತೆ ಬಂದೂಕು ಮತ್ತು ಬಾಂಬಿನ ಮೂಲಕ ದಾಳಿ ನಡೆಸಿದ್ದರು. 26/11 ಮುಂಬೈ ದಾಳಿ ಎಂದೇ ಚಿರಪರಿಚಿತರಾಗಿರುವ ಈ ಭೀಕರ ಘಟನೆಯ ಕಹಿನೆನಪು ಇನ್ನು ಜನಮಾನಸದಿಂದ ಮರೆಯಾಗಿಲ್ಲ.
ಈತನ ಬೈಕ್ ನೋಂದಣಿ ಸಂಖ್ಯೆಯನ್ನು ಮುಂಬೈ ಭೀಕರ ಭಯೋತ್ಪಾದನಾ ದಾಳಿಯನ್ನು ನಡೆದ ದಿನಾಂಕಕ್ಕೆ ಪೊಲೀಸರು ಲಿಂಕ್ ಮಾಡಿದ್ದಾರೆ. ಇದೇ ನೋಂದಣಿಯ ಬೈಕ್ ನಲ್ಲಿ ಇಬ್ಬರು ಹಂತಕರಾದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಅಖ್ತರಿ ಟೈಲರ್ ಕನ್ಹಯ್ಯಾ ಲಾಲ್ ಅವರ ಕುತ್ತಿಗೆಯನ್ನು ಕ್ರೂರವಾಗಿ ಸೀಳಿ ಪರಾರಿಯಾಗಲು ಯತ್ನಿಸಿದ್ದರು. ಆರೋಪಿಗಳ ಬಂಧನದ ಬಳಿಕ RJ 27 AS 2611 ರ ನೋಂದಣಿ ಸಂಖ್ಯೆ ಹೊಂದಿರುವ ಈ ಬೈಕ್ ಈಗ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯ ವಶದಲ್ಲಿದೆ. ಪ್ರಾದೇಶಿಕ ಸಾರಿಗೆ ಕಚೇರಿ (RTO) ದಾಖಲೆಗಳು 2013 ರಲ್ಲಿ HDFC ನಿಂದ ಸಾಲವನ್ನು ಪಡೆದು ರಿಯಾಜ್ ಅಖ್ತರಿ ಬೈಕು ಖರೀದಿಸಿದ್ದು ವಾಹನದ ವಿಮೆಯು 2014 ಮಾರ್ಚ್ನಲ್ಲಿ ಮುಕ್ತಾಯಗೊಂಡಿತ್ತು
ರಿಯಾಜ್ ಉದ್ದೇಶಪೂರ್ವಕವಾಗಿ 2611 ನೋಂದಣಿ ಸಂಖ್ಯೆಯನ್ನು ಕೇಳಿ ಪಡೆದು ಈ ನಂಬರ್ ಪ್ಲೇಟ್ಗೆ ಹೆಚ್ಚುವರಿ ₹ 5,000 ಪಾವತಿಸಿದ್ದಾನೆ. ಪೊಲೀಸರು ಈ ನೋಂದಣಿ ಸಂಖ್ಯೆಯ ಮೂಲಕ ರಿಯಾಜ್ ಅಖ್ತರಿಯ ಮತ್ತಷ್ಟು ಮಾಹಿತಿ ಹಾಗೂ ಇತರ ಸಂಚಿನ ಬಗ್ಗೆ ಪ್ರಮುಖ ಸುಳಿವುಗಳನ್ನು ಕಲೆ ಹಾಕುತ್ತಿದ್ದಾರೆ
2014ರ ಹಿಂದೆಯೇ ರಿಯಾಜ್ನ ಒಳಗೊಳಗೆ ಯಾವ ಸಂಚು ರೂಪಿಸಿದ್ದ ಎಂಬುದಕ್ಕೆ ನಂಬರ್ ಪ್ಲೇಟ್ ಕೂಡ ಸುಳಿವು ನೀಡಬಹುದೆಂದು ಪೊಲೀಸರು ನಂಬಿದ್ದು, ರಿಯಾಜ್ನ ಪಾಸ್ಪೋರ್ಟ್ ನಲ್ಲೂ 2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು , ಈತ ಪಾಕಿಸ್ತಾನಕ್ಕೆ ಮಾಡಿರುವ ದೂರವಾಣಿ ಕರೆಗಳು ಕೂಡಾ ತನಿಖೆಯ ಭಾಗವಾಗಲಿದೆ.