ಬೆಂಗಳೂರು, ಜು 01 (DaijiworldNews/DB): ಮೂರೂವರೆ ವರ್ಷದ ಮಗುವಿನ ಕುತ್ತಿಗೆಗೆ ಶಾಲ್ ಬಿಗಿದು ಕೊಂದು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಆರ್ ಆರ್ ನಗರದಲ್ಲಿ ನಡೆದಿದೆ.
ಮಗು ರಿಯಾಳನ್ನು ಕೊಂದು ದೀಪಾ (31) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ’ನನ್ನ ಸಾವಿಗೆ ಯಾರೂ ಕಾರಣರಲ್ಲ, ಸ್ವಾರಿ ಅಮ್ಮಾ’ ಎಂಬುದಾಗಿ ಬರೆದಿದ್ದ ಡೆತ್ನೋಟ್ ಪತ್ತೆಯಾಗಿದೆ.
ಮೂಲತಃ ಬ್ರಹ್ಮಾವರದವರಾದ ದೀಪಾ ಬೆಂಗಳೂರಿನ ಆರ್.ಆರ್. ನಗರದ ಅಪಾರ್ಟ್ಮೆಂಟ್ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಪತಿ ಆದರ್ಶ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, 2017ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಕಳೆದೊಂದು ವಾರದಿಂದ ದೀಪಾ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ ಹೊಟ್ಟೆನೋವು ವಾಸಿಯಾದ ಹಿನ್ನೆಲೆಯಲ್ಲಿ ದೀಪಾ ತುಂಬಾ ನೊಂದಿದ್ದರು ಎಂದು ತಿಳಿದು ಬಂದಿದೆ, ಇದೇ ಕಾರಣದಿಂದ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ. ರಾತ್ರಿ ವೇಳೆ ಮಗುವಿನ ಕುತ್ತಿಗೆಗೆ ಶಾಲ್ ಬಿಗಿದು ಹತ್ಯೆಗೈದು ತಾನೂ ನೇಣು ಹಾಕಿಕೊಂಡಿದ್ದಾರೆ.
ಆರ್ ಆರ್ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೀಪಾ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನ ಕೇವಲ ದುಃಖಗಳಿಂದ ಕೂಡಿದೆ. ಕ್ಷಮೆ ಇರಲಿ ಅಮ್ಮ ಮತ್ತು ದಿವ್ಯಾ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.