ಬೆಂಗಳೂರು, ಜು 01 (DaijiworldNews/DB): ಎಚ್.ಡಿ. ದೇವೇಗೌಡರ ಬಗ್ಗೆ ಮಾತನಾಡಿರುವ ರಾಜಣ್ಣ ಅವರು ತಮ್ಮ ಹೀನ ಸಂಸ್ಕೃತಿಯನ್ನು ತೋರಿದ್ದಾರೆ. ಅವರು ದುರಹಂಕಾರಕ್ಕೆ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜನತಾಮಿತ್ರ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಮಾತನಾಡುವ ರಾಜಣ್ಣನವರ ಸಂಸ್ಕೃತಿ ಏನೆಂಬುದನ್ನು ತೋರಿಸುತ್ತದೆ. ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಜಣ್ಣನವರ ಪರವಾಗಿ ದೇವೇಗೌಡರು ಪ್ರಚಾರ ಮಾಡಿದ್ದರಿಂದಲೇ ಅವರು ವಿಧಾನಸೌಧ ಮೆಟ್ಟಿಲೇರಲು ಸಾಧ್ಯವಾಗಿದ್ದು. ಅದನ್ನು ಮರೆತು ಈಗ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಭುಜಕ್ಕೆ ಭುಜ ಕೊಟ್ಟೇ ದೇವರ ಮೆರವಣಿಗೆ ಕೂಡಾ ನಡೆಯುವುದು. ದೇವೇಗೌಡರು ಶತಾಯುಷಿಗಳಾಗಿ ಬದುಕುತ್ತಾರೆ. ರಾಜಣ್ಣ ಬ್ರಹ್ಮ ಅಲ್ಲ, ಅವರೂ ಒಬ್ಬ ಹುಲು ಮಾನವ. ತುಮಕೂರಿನಲ್ಲಿ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಲು ಕುತಂತ್ರ ನಡೆಸಿದ್ದು ಇದೇ ರಾಜಣ್ಣ ಎಂದು ಇದೇ ವೇಳೆ ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ದೇವೇಗೌಡರು ರಾಜ್ಯದ ಪಿತಾಮಹ. ಆರೂವರೆ ಕೋಟಿ ಕನ್ನಡಿಗರ ತಂದೆ ಅವರು. ರಾಜಣ್ಣ ಅವರು ಕೂಡಲೇ ದೇವೇಗೌಡರ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಒತ್ತಾಯಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಈಗ ಇಬ್ಬರ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ದೇವೇಗೌಡರಿಗೆ ಸಾವೆಂಬುದಿಲ್ಲ.ಸೂರ್ಯ, ಚಂದ್ರ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ. ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ರಾಜಣ್ಣ ಅವರಿಗೆ ಶೋಭೆಯಲ್ಲ. ಕೂಡಲೇ ದೇವೇಗೌಡರ ನಿವಾಸಕ್ಕೆ ಬಂದು ಅವರು ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು.
--