ನವದೆಹಲಿ, ಜು 01 (DaijiworldNews/DB): ತಮ್ಮ ಮೇಲೆ ಅವ್ಯವಹಾರ ಆರೋಪ ಮಾಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿರುದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಸಿಎಂ ಆಗುವುದಕ್ಕೂ ಮೊದಲು ಅಸ್ಸಾಂ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವೇಳೆ ಪಿಪಿಇ ಸಾಧನಗಳ ಗುತ್ತಿಗೆ ನೀಡುವಾಗ ಅವ್ಯವಹಾರ ಎಸಗಿದ್ದಾರೆ. ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾರ ಪರಿಚಯದ ಕಂಪೆನಿಗೆ ಹೆಚ್ಚು ಹಣ ಪಾವತಿ ಮಾಡಿ ಪಿಪಿಇ ಕಿಟ್ಗಳ ಗುತ್ತಿಗೆ ನೀಡಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದರು. ಅಲ್ಲದೆ, ಪತ್ನಿಯ ಪರಿಚಯಸ್ಥ ಕಂಪೆನಿಗೆ ಪಿಪಿಇ ಕಿಟ್ಗಳಿಗಾಗಿ 990 ರೂ. ಪಾವತಿಸಿದ್ದಾರೆ. ಆದರೆ ಮತ್ತೊಂದು ಕಂಪೆನಿಯಿಂದ ಅದೇ ದಿನ 600 ರೂ. ಪಾವತಿಸಿ ಖರೀದಿ ಮಾಡಿದ್ದಾರೆ ಎಂಬುದು ಸಿಸೋಡಿಯಾ ಅವರ ಆಪಾದನೆಯಾಗಿತ್ತು. ಈ ಸಂಬಂಧ ಸೂಕ್ತ ದಾಖಲೆಗಳಿರುವುದಾಗಿಯೂ ಅವರು ಹೇಳಿದ್ದರು.
ಇನ್ನು ಸಿಸೋಡಿಯಾ ಆಪಾದನೆಯಲ್ಲಿ ಸತ್ಯಾಂಶವಿಲ್ಲ ಎಂದು ಹಿಮಂತ್ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಈಗಾಗಲೇ ಸಿಸೋಸಿಯಾ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.