ಮುಂಬಯಿ, ಜು 01 (DaijiworldNews/DB): ನನ್ನ ಮೇಲೆ ನಿಮಗೆ ಅಸಮಾಧಾನವಿದ್ದಲ್ಲಿ ನನ್ನ ಬೆನ್ನಿಗೆ ಚೂರಿ ಹಾಕಿ. ಆದರೆ ಮುಂಬೈ ಜನತೆಗೆ ಮೋಸ ಮಾಡಬೇಡಿ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಸ್ಥಾನದಿಂದ ನಿರ್ಗಮಿಸಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಕಾರ್ ಶೆಡ್ನ್ನು ಆರೆ ಕಾಲೊನಿಗೆ ಸ್ಥಳಾಂತರಿಸುವ ಶಿಂಧೆ ನಿಲುವು ಒಪ್ಪುವಂತದ್ದಲ್ಲ. ಆರೆ ಕಾಲೊನಿಗೆ ಸ್ಥಳಾಂತರಿಸಿದರೆ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗಲಿದೆ. ನನ್ನ ಮೇಲೆ ಕೋಪ ಇದ್ದರೆ ನನ್ನ ಯೋಜನೆಗಳಲ್ಲಿ ಬದಲಾವಣೆ ಮಾಡಿ ಮುಂಬೈ ಜನತೆಗೆ ಮೋಸ ಮಾಡಬೇಡಿ. ನೇರವಾಗಿ ನನ್ನ ಬೆನ್ನಿಗೆ ಚೂರಿ ಹಾಕಿ ಎಂದರು.
2019ರಲ್ಲಿ ಈ ಯೋಜನೆಯು ಮುಂಬೈನಲ್ಲಿ ಸಾಕಷ್ಟು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಮುಂಬೈನ ಹಸಿರು ಶ್ವಾಸಕೋಶ ಎಂದು ಕರೆಯಲ್ಪಡುವ ಆರೆ ಕಾಲೊನಿಯಲ್ಲಿ ಮರಗಳನ್ನು ಕಡಿದು ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಪರಿಸರ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಳಿಕ ಆರೆ ಕಾಲೊನಿಯಲ್ಲಿ ಯೋಜನೆ ಅನುಷ್ಠಾನ ತಡೆ ಹಿಡಿಯಲಾಗಿತ್ತು. ಇದೀಗ ವಿವಾದಿತ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.