ನವದೆಹಲಿ, ಜು 01 (DaijiworldNews/DB): ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಒಟ್ಟು 98 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೆ ಇಬ್ಬರ ಅರ್ಜಿ ಹೊರತುಪಡಿಸಿ 96 ಮಂದಿಯ ಅರ್ಜಿ ತಿರಸ್ಕೃತಗೊಂಡಿವೆ.
ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಯುಪಿಎ ಅಭ್ಯರ್ಥಿ ಯಶವಂತ್ ಸಿನ್ಹಾ ಹೊರತುಪಡಿಸಿ ಮತ್ತೆಲ್ಲರ ಅರ್ಜಿ ತಿರಸ್ಕೃತಗೊಂಡಿದೆ. ಈ ಪೈಕಿ 26 ಮಂದಿಯ ಅರ್ಜಿ ನಾಮಪತ್ರ ಭರ್ತಿ ಮಾಡುವ ಸಂದರ್ಭದಲ್ಲೇ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತವಾಗಿತ್ತು. ಉಳಿದಂತೆ 70 ಮಂದಿಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಬೇಕಾದ ಅರ್ಹತೆಗಳು ಇರಲಿಲ್ಲ ಎನ್ನುವ ಕಾರಣಕ್ಕೆ ನಾಮಪತ್ರಗಳ ಪರಿಶೀಲನೆ ವೇಳೆ ತಿರಸ್ಕೃತಗೊಳಿಸಲಾಗಿದೆ. ಇಷ್ಟೂ ಮಂದಿ ಒಟ್ಟು 115 ಸೆಟ್ಗಳ ನಾಮಪತ್ರಗಳನ್ನು ಭರ್ತಿ ಮಾಡಿ ಸಲ್ಲಿಸಿದ್ದರು. ಇನ್ನು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು 15,000 ರೂ. ಠೇವಣಿ ಇಡಬೇಕು. ಠೇವಣಿ ಇಡಲು ಸಾಧ್ಯವಾಗದ ಕೆಲವರು ಕೂಡಾ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ದೆಹಲಿಯೊಂದರಿಂದಲೇ 19 ಮಂದಿ ಮಂದಿ ನಾಮಪತ್ರ ಸಲ್ಲಿಸಿದ್ದರು. ಉತ್ತರ ಪ್ರದೇಶದಿಂದ 16, ಮಹಾರಾಷ್ಟ್ರದಿಂದ 11, ತಮಿಳುನಾಡಿನಿಂದ 10 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. 10 ಮಂದಿ ಮಹಿಳೆಯರು ಕೂಡಾ ನಾಮಪತ್ರ ಸಲ್ಲಿಸಿದ್ದರು. 17 ರಾಜ್ಯಗಳಿಂದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂಪಡೆಯಲು ಜುಲೈ 2ರವರೆಗೆ ಅವಕಾಶವಿದೆ.