ಉದಯಪುರ, ಜು 01 (DaijiworldNews/MS): ರಾಜಸ್ತಾನದ ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
"ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚು ರೂಪಿಸಿದ ಆರೋಪ ಮೇರೆಗೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಇಡೀ ಅಪರಾಧದ ಹಿಂದೆ ಸಂಚು ಮತ್ತು ಸಿದ್ಧತೆಯಲ್ಲಿ ಅವರು ಭಾಗಿಯಾಗಿದ್ದರು" ಎಂದು ಐಜಿ ಪ್ರಫುಲ್ಲ ಕುಮಾರ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹ್ಸಿನ್ ಮತ್ತು ಆಸಿಫ್ ಎಂದು ಗುರುತಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ) ಬೆಂಬಲದೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ.
ಇದೇ ವೇಳೆ ಈ ಹಿಂದೆ ಬಂಧಿಸಲಾದ ಇಬ್ಬರು ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ನನ್ನು ಗುರುವಾರ ರಾತ್ರಿ ಹೆಚ್ಚಿನ ಭದ್ರತೆಯೊಂದಿಗೆ ಅಜ್ಮೀರ್ ಜೈಲಿನಲ್ಲಿ ಇರಿಸಲಾಗಿದೆ.