ಮುಂಬೈ, ಜು 01 (DaijiworldNews/DB): ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಸಂತೋಷದಿಂದ ಪ್ರಮಾಣವಚನ ಸ್ವೀಕರಿಸಿಲ್ಲ. ಅವರ ಮುಖಭಾವದಿಂದಲೇ ಅದು ಸ್ಪಷ್ಟವಾಗುತ್ತದೆ ಎಂದು ಹಿರಿಯ ರಾಜಕಾರಣಿ ಶರದ್ ಪವಾರ್ ಹೇಳಿದ್ದಾರೆ.
ಫಡ್ನವಿಸ್ ಡಿಸಿಎಂ ಸ್ಥಾನವನ್ನು ಸಂತೋಷದಿಂದ ಒಪ್ಪಿಕೊಂಡಿಲ್ಲ. ಅವರು ಆರೆಸ್ಸೆಸ್ ಸ್ವಯಂ ಸೇವಕರು. ಹಾಗಾಗಿ ಆ ಸ್ಥಾನವನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಆ ಸ್ಥಾನದ ಮೇಲೆ ಸಂತೋಷವಿದ್ದಂತೆ ನನಗೆ ಕಾಣುವುದಿಲ್ಲ ಎಂಬುದಾಗಿ ಪವಾರ್ ಹೇಳಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆಯನ್ನು ಗುರುವಾರ ಸಂಜೆ ವೇಳೆಗೆ ಮುಖ್ಯಮಂತ್ರಿಯಾಗಿ ಫಡ್ನವಿಸ್ ಘೋಷಿಸಿದರು. ಇದಕ್ಕೂ ಮುನ್ನ ತಾನು ಸರ್ಕಾರದ ಭಾಗವಾಗುವುದಿಲ್ಲ ಎಂದಿದ್ದರು. ಆದರೆ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಸ್ಥಾನದ ಮೇಲೆ ಫಡ್ನವಿಸ್ ಕಣ್ಣಿಟ್ಟಿದ್ದರು. ಆದರೆ ಕೊನೆ ಕ್ಷಣದ ಬೆಳವಣಿಗೆಯಲ್ಲಿ ಅವರು ಆ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು ಎನ್ನಲಾಗುತ್ತಿದೆ.