ವಯನಾಡ್, ಜು 01 (DaijiworldNews/MS): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಯನಾಡ್ ಪ್ರವಾಸ ಕೈಗೊಂಡಿದ್ದಾರೆ.
ಮೂರು ದಿನಗಳ ಭೇಟಿಯ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರದಲ್ಲಿ ಮನಂತವಾಡಿಯಲ್ಲಿ ರೈತರ ಬ್ಯಾಂಕ್ ಕಟ್ಟಡ ಉದ್ಘಾಟನೆ ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಯುಡಿಎಫ್ ಬಹುಜನ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವಾರದ ಹಿಂದಷ್ಟೇ ಸಂಸದರ ಕಚೇರಿಗೆ ಎಸ್ಎಫ್ಐ ಕಾರ್ಯಕರ್ತರು ನುಗ್ಗಿ ಹಾನಿ ಮಾಡಿದ್ದರು. ಇದಾದ ಬಳಿಕ ಗುರುವಾರ ರಾತ್ರಿ ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಪೋಟಕ ಎಸೆಯಲಾಗಿತ್ತು. ಉಭಯ ಪಕ್ಷಗಳ ಕಚೇರಿ ಮೇಲಿನ ದಾಳಿಯಿಂದ ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅರಿವಿದ್ದೇ ವಯನಾಡ್ ಸಂಸದರ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಈ ನಡುವೆ ರಾಹುಲ್ ಗಾಂಧಿ ಕೇರಳಕ್ಕೆ ಭೇಟಿ ನೀಡುತ್ತಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಾನುವಾರ ಕೋಝಿಕ್ಕೋಡ್ನಿಂದ ದೆಹಲಿಗೆ ವಾಪಸಾಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಪಕ್ಷದ ಅಲ್ಲಿನ ಮುಖ್ಯಸ್ಥ ಕೆ. ಸುಧಾಕರನ್ ಬರಮಾಡಿಕೊಂಡರು.