ಮುಂಬೈ, ಜು 01 (DaijiworldNews/DB): ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಮಾಸ್ಟರ್ ಸ್ಟ್ರೋಕ್ ನನ್ನನ್ನು ಮುಖ್ಯಮಂತ್ರಿಯನ್ನಾಗಿಸಿದೆ ಎಂದು ಮಹಾರಾಷ್ಟ್ರ ನೂತನ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ವ್ಯಾಮೋಹ ಬಿಜೆಪಿಗೆ ಹೆಚ್ಚಿದೆ ಎಂದೇ ಜನ ಭಾವಿಸಿದ್ದರು. ಆದರೆ ಅಂತಹ ಯಾವುದೇ ವ್ಯಾಮೋಹ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಅತಿ ಹೆಚ್ಚು ಶಾಸಕರ ಸಂಖ್ಯಾಬಲವಿದ್ದರೂ ಅಧಿಕಾರವನ್ನು ಬೇರೊಬ್ಬರಿಗೆ ವಹಿಸಿಕೊಡಲು ಸಾಮಾನ್ಯದವರಿಂದ ಸಾಧ್ಯವಾಗುವುದಿಲ್ಲ. ಅದಕ್ಕೊಂದು ವಿಶಾಲ ಹೃದಯವಿರಬೇಕು. ಫಡ್ನವೀಸ್ ಮಾಸ್ಟರ್ ಸ್ಟ್ರೋಕ್ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದರು.
ಫಡ್ನವೀಸ್ ನಿರ್ಧಾರವು ರಾಜ್ಯ ಮತ್ತು ದೇಶದ ಜನತೆಗೆ ಹೊಸ ಸಂದೇಶವನ್ನು ರವಾನಿಸಿದೆ. ಪಂಚಾಯತ್, ಸ್ಥಳೀಯ ಸಂಸ್ಥೆ ಅಧ್ಯಕ್ಷ ಸ್ಥಾನ ಸಿಕ್ಕರೂ ಬಿಡದಿರುವ ಈ ಕಾಲಘಟ್ಟದಲ್ಲಿ 120 ಶಾಸಕರ ಬಲ ಹೊಂದಿದ್ದರೂ ಸಿಎಂ ಸ್ಥಾನವನ್ನು ನನಗೆ ಬಿಟ್ಟುಕೊಡುವ ಮೂಲಕ ಅವರು ಮಾದರಿ ಕೆಲಸವನ್ನು ಮಾಡಿದ್ದಾರೆ ಎಂದವರು ಬಣ್ಣಿಸಿದರು.