ಮುಂಬೈ,, ಜು 01 (DaijiworldNews/DB): ಉದ್ದವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹಿತ 16 ಮಂದಿ ಶಾಸಕರನ್ನು ಅಮಾನತು ಮಾಡುವಂತೆ ಕೋರಿ ಶಿವಸೇನೆ ಮುಖಂಡರೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಶಿವಸೇನೆಯ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ಶುಕ್ರವಾರ ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಶಿಂಧೆ ಮತ್ತು ಇತರ ಶಾಸಕರಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆ ಅನರ್ಹತೆ ನೋಟೀಸಗೆ ಜೂನ್ 27ರೊಳಗೆ ಉತ್ತರಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸಭಾಧ್ಯಕ್ಷ ನರಹರಿ ಜಿರ್ವಾಲ್ ಸೂಚಿಸಿದ್ದರು. ಇದಾದ ಬಳಿಕ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪಾರ್ಡಿವಾಲಾ ಅವರ ರಜಾಕಾಲದ ಪೀಠವು ಸೋಮವಾರದವರೆಗೆ ಮಧ್ಯಂತರ ಪರಿಹಾರ ಒದಗಿಸಿತ್ತು. ಬಳಿಕ ಜುಲೈ 12ರೊಳಗೆ ಉತ್ತರ ನೀಡುವಂತೆ ರಜಾಕಾಲದ ನ್ಯಾಯಪೀಠವು ಬಂಡಾಯ ಶಾಸಕರಿಗೆ ತಿಳಿಸಿತ್ತು.