ನವದೆಹಲಿ, ಜು 01 (DaijiworldNews/DB): ಪ್ರವಾದಿ ಮಹಮ್ಮದ್ರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದ ಜನರ ಕ್ಷಮೆಯಾಚಿಸಿ ಎಂದು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಿವಾದಾತ್ಮಹ ಹೇಳಿಕೆ ನೀಡಿ ದೇಶದಲ್ಲಿ ಹಲವಾರು ಹಿಂಸಾಚಾರಕ್ಕೆ ಕಾರಣವಾದ ನೂಪುರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಉದಯಪುರದಲ್ಲಿ ನಡೆದ ಘಟನೆಗೆ ನೀವೇ ಕಾರಣ. ವಿವಾದಾತ್ಮಕ ಹೇಳಿಕೆ ಕುರಿತು ಇಡೀ ದೇಶದ ಜನರ ಕ್ಷಮೆ ಯಾಚಿಸಿ ಎಂದು ಸೂಚನೆ ನೀಡಿದೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ವಿರುದ್ದ ದೆಹಲಿ, ಕೋಲ್ಕತ್ತಾ, ಬಿಹಾರ, ಪುಣೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ತಮ್ಮ ವಿರುದ್ದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ದೂರುಗಳನ್ನು ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಬೇರೆ ಬೇರೆ ರಾಜ್ಯಗಳಿಗೆ ತೆರಳುವುದರಿಂದ ಜೀವಕ್ಕೆ ಅಪಾಯವಿದೆ. ಹೀಗಾಗಿ ದೆಹಲಿಗೆ ಎಲ್ಲಾ ಪ್ರಕರಣಗಳನ್ನು ವರ್ಗಾವಣೆ ಮಾಡಬೇಕು ಎಂಬುದಾಗಿ ಕೋರಿದ್ದಾರೆ ಎನ್ನಲಾಗಿದೆ.