ಮಣಿಪುರ, ಜು 01 (DaijiworldNews/DB): ಮಣಿಪುರದಲ್ಲಿ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 60ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಮಣಿಪುರದ ನೋನಿ ಜಿಲ್ಲೆಯ ತುಪುಲ್ ರೈಲ್ವೆ ನಿಲ್ದಾಣದ ಬಳಿ ಗುರುವಾರ ಘಟನೆ ಸಂಭವಿಸಿದೆ. ಈಗಾಗಲೇ ಅವಶೇಷಗಳಡಿ ಸಿಲುಕಿದ್ದ 23 ಮಂದಿಯನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದ್ದು, ಇನ್ನೂ 60ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆದರೆ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಡಿಜಿಪಿ ದೌಂಗೆಲ್ ಮಾಹಿತಿ ನೀಡಿದ್ದಾರೆ.
ಭೂಕುಸಿತದ ಪರಿಣಾಮ ಗ್ರಾಮಸ್ಥರು, ಯೋಧರು, ರೈಲ್ವೇ ಸಿಬಂದಿ, ಕಾರ್ಮಿಕರು ಸೇರಿದಂತೆ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಭಾರತೀಯ ಸೈನ್ಯ, ಅಸ್ಸಾಂ ರೈಫಲ್ಸ್, ಯೋಧರು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.