ನವದೆಹಲಿ,ಜು 01 (DaijiworldNews/MS): ಪಂಜಾಬ್ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಟ್ಟಿರುವ ನೂತನ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸಲು ಮುಂದಾಗಿದ್ದಾರೆ.
ಸದ್ಯ ಲಂಡನ್ ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ, ಅಮರಿಂದರ್ ಸಿಂಗ್ ಮುಂದಿನ ವಾರದ ಕೊನೆಯಲ್ಲಿ ಅವರು ಭಾರತಕ್ಕೆ ಮರಳುವ ಸಾಧ್ಯತೆಯಿದ್ದು, ಆ ಬಲಿಕ ಸೇರ್ಪಡೆಯ ಪ್ರಕ್ರಿಯೆಯು ಪ್ರಾರಂಭವಾಗುವ ಸಾಧ್ಯತೆ ಇದೆ.
ಅಮರಿಂದರ್ ಸಿಂಗ್ ಅವರು ಕಳೆದ ವರ್ಷದ ಕೊನೆಯಲ್ಲಿ ಸಿಎಂ ಹುದ್ದೆಯಿಂದ ತೆಗೆದುಹಾಕಲ್ಪಟ್ಟ ಬಳಿಕ ಕಾಂಗ್ರೆಸ್ ಪಕ್ಷವನ್ನು ತೊರೆದು ಹೊಸ ರಾಜಕೀಯ ಪಕ್ಷ - ಪಂಜಾಬ್ ಲೋಕ ಕಾಂಗ್ರೆಸ್ - ಅನ್ನು ರಚಿಸಿದ್ದರು. ಪಂಜಾಬ್ನ ಕಾಂಗ್ರೆಸ್ ಧುರೀಣ ತಮ್ಮ ಹೊಸ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಿದ್ದಾರೆ ಎಂದು ವರದಿಯಾಗಿದೆ.
ಆದರೆ ಕೇಂದ್ರದ ಮಾಜಿ ಸಚಿವೆ ಹಾಗೂ ಪಟಿಯಾಲದ ಹಾಲಿ ಸಂಸದೆಯಾಗಿರುವ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರಿಗೆ ಅವಕಾಶ ಕಲ್ಪಿಸುವುದು ಹೇಗೆ ಎಂಬುದು ಬಿಜೆಪಿಯ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಣೀತ್ ಕೌರ್ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದು ತಮ್ಮ ಮಗಳು ಜೈ ಇಂದರ್ ಕೌರ್ ಅವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿ ಜೈ ಇಂದರ್ ಕೌರ್ ಅವರಿಗೆ ಪಟಿಯಾಲ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಬೇಕೆಂದು ಅವರು ಬಯಸುತ್ತಿದ್ದಾರೆ ಎನ್ನಲಾಗಿದೆ.
ಜೈ ಇಂದರ್ ಕೌರ್ ಅವರ ಪತಿಯ ಕಂಪನಿ ಸಿಂಭೋಲಿ ಶುಗರ್ಸ್ ಲಿಮಿಟೆಡ್ನ ಬ್ಯಾಂಕ್ ಹಣದ ದುರುಪಯೋಗ ಮತ್ತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾರಣ ಬಿಜೆಪಿ ಕೂಡ ಜೈ ಇಂದರ್ ಕೌರ್ ಅವರಿಗೆ ಅವಕಾಶ ಕಲ್ಪಿಸಲು ಉತ್ಸುಕವಾಗಿಲ್ಲ ಎಂದು ವರದಿಯಾಗಿದೆ.