ನವದೆಹಲಿ, ಜು 01 (DaijiworldNews/MS): ತುಂಬಿ ಹರಿಯುತ್ತಿರುವ ಗಂಗಾನದಿಗೆ ಧುಮುಕುವುದೆಂದರೆ ಎಂತಹ ಈಜುಬಲ್ಲವರು ಒಮ್ಮೆ ಹಿಂದುಮುಂದು ಯೋಚಿಸುತ್ತಾರೆ. ಆದರೆ ಈ ಹರಿಯಾಣದ ಸೋನೆಪತ್ ಮೂಲದ 73 ವರ್ಷದ ವೃದ್ಧೆ ಓಂವತಿ ಅವರು ಮಾಡಿದ ಸಾಹಸವನ್ನು ನೋಡಿದ್ರೆ ಹುಬ್ಬೇರುವುದಂತೂ ಖಂಡಿತ.
ದೇಹಕ್ಕೆ ಮುಪ್ಪು ಹೊರತು ಮನಸ್ಸಿಗಲ್ಲ ಎಂಬುವುದನ್ನುಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಈ ವೃದ್ದೆ. ಇವರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಹರಿದ್ವಾರದ ಹರ್ ಕಿ ಪೌರಿಯಲ್ಲಿರುವ 40 ಅಡಿ ಎತ್ತರದ ಸೇತುವೆಯಿಂದ ಜಿಗಿದು ಕೆಳಗೆ ಹರಿಯುವ ಗಂಗಾ ನದಿಗೆ ಧುಮುಕಿದ್ದಾರೆ.
ಮೊದಲು ಕಬ್ಬಿಣದ ತಡೆಗೋಡೆಯೊಳಗೆ ನುಸುಳಿ ಸೇತುವೆಯ ಅಂಚಿನಲ್ಲಿ ನಿಂತುಕೊಳ್ಳುವ ಅಜ್ಜಿ ನೇರವಾಗಿ ಗಂಗಾ ನದಿಗೆ ಯಾವುದೇ ಅಂಜಿಕೆ ಇಲ್ಲದೆ ಜಿಗಿಯುತ್ತಾರೆ. ವೇಗವಾಗಿ ನೀರು ಹರಿಯುತ್ತಿದ್ದರು ಆರಾಮಾಗಿ ಈಜುತ್ತಾ ನದಿ ತೀರಕ್ಕೆ ಹೋಗುತ್ತಾರೆ.
ಈ ವಿಡಿಯೋ ನೋಡಿದವರು ಅವಕ್ಕಾಗಿದ್ದಾರೆ. 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಅಜ್ಜಿಯ ಉತ್ಸಾಹಕ್ಕೆ ಫಿದಾ ಆಗಿದ್ದಾರೆ. ವೃದ್ಧೆಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ ಹಲವಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ನಾನು ಬಾಲ್ಯದಲ್ಲಿ ನದಿಗಳಲ್ಲಿ ಈಜುತ್ತಿದ್ದ ಕಾರಣ ನನಗೆ ಯಾವುದೇ ಭಯವಾಗಲಿಲ್ಲ. ಆದರೆ, ಯಾರೂ ಕೂಡ ನನ್ನನ್ನು ಅನುಸರಿಸಬೇಡಿ ಎಂದು ಎಚ್ಚರಿಕೆ ಮಾತುಗಳನ್ನು ಹೇಳಿದ್ದಾರೆ.