ಚಾಮರಾಜನಗರ, ಜ 01(DaijiworldNews/HR): ಹನೂರು ತಾಲೂಕಿನ ದೊಡ್ಡಾಣೆ ಗ್ರಾಮದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ಕಾಣಿಸಿಕೊಂಡಿದ್ದರಿಂದ ಡೋಲಿ ಕಟ್ಟಿ 8 ಕಿಮೀ ಹೊತ್ತು ಆಸ್ಪತ್ರೆಗೆ ಸಾಗಿಸಿರುವ ಘಟನೆ ನಡೆದಿದೆ.
ಶಾಂತಲಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಯಾವುದೇ ಸಾರಿಗೆ ಸಂಪರ್ಕ ಸಿಗದೇ 8 ಕಿಮೀ ದೂರದ ಮಾರ್ಟಳ್ಳಿ ಆಸ್ಪತ್ರೆಗೆ ಡೋಲಿಯಲ್ಲಿ ಸಾಗಿಸಿದ್ದು ಶಾಂತಲಾ ಅವರು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.
ಇನ್ನು ಮಲೆ ಮಹದೇಶ್ವರಬೆಟ್ಟ ತಪ್ಪಲಿನ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿರುವ ಅರಣ್ಯ ಇಲಾಖೆ ಗರ್ಭಿರ್ಣಿಯರು, ಅನಾರೋಗ್ಯ ಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗೆ ಜಾರಿಗೆ ತಂದಿರುವ ಜನವನ ಸಾರಿಗೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಪಡಿಸಲನತ್ತ, ದೊಡ್ಡಾಣೆ ಗ್ರಾಮಕ್ಕೆ ಕಚ್ಚಾ ರಸ್ತೆಯೂ ಇಲ್ಲದಿರುವುದರಿಂದ ಅನಾರೋಗ್ಯಕ್ಕೀಡಾದರೇ ರೋಗಿಗಳನ್ನು ಡೋಲಿಯಲ್ಲಿ ಹೊತ್ತು ಸಾಗಬೇಕಿದೆ.
ಇನ್ನು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಜನರಿಗೆ 24×7 ವಾಹನ ವ್ಯವಸ್ಥೆ ಎಂದು ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆ ವಾಹನಗಳನ್ನು ನಿಯೋಜಿಸಿತ್ತು. ಆದರೆ ಚಾಲಕರು, ಅಧಿಕಾರಿಗಳು ಫೋನ್ ಸ್ವಿಚ್ ಆಪ್ಡ್ ಆಗಿದ್ದರಿಂದ ಜನವನ ಸಾರಿಗೆಯಿದ್ದರೂ ಇಲ್ಲದಂತಾಗಿದೆ.