ಬೆಂಗಳೂರು, ಜು 01 (DaijiworldNews/DB): ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ಅನ್ವಯ ಜಾರಿ ನಿರ್ದೇಶನಾಲಯವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ದ ದಾಖಲಿಸಿರುವ ಪ್ರಕರಣದ ವಿಚಾರಣೆ ಇಂದಿನಿಂದ ದಿಲ್ಲಿಯ ವಿಶೇಷ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.
ಈ ಪ್ರಕರಣದಲ್ಲಿ ಡಿಕೆಶಿ ಸೇರಿದಂತೆ ಐವರ ವಿರುದ್ದ ದೂರು ದಾಖಲಾಗಿದೆ. ಈ ಹಿಂದೆ 2019ರಂದು ಡಿ.ಕೆ. ಶಿವಕುಮಾರ್ ಬಂಧಿಸಲ್ಪಟ್ಟಿದ್ದರು. ಬಳಿಕ ಮೇ ತಿಂಗಳಲ್ಲಿ ಅವರ ವಿರುದ್ದ ಇಡಿ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದು, ಇಂದಿನಿಂದ ಇದರ ವಿಚಾರಣೆ ಆರಂಭಗೊಳ್ಳಲಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಹಲವು ಮಹತ್ವದ ಚಟುವಟಿಕೆಗಳು ನಡೆಯುತ್ತಿರುವಂತೆಯೇ ಇಡಿ ವಿಚಾರಣೆಗೆ ಕರೆದಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಅಲ್ಲದೆ ಇದು ಶಿವಕುಮಾರ್ ಅವರ ರಾಜಕೀಯ ಜೀವನದ ಮೇಲೆಯೂ ಮಹತ್ವದ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಈ ನಡುವೆ ವಿಚಾರಣೆ ಮುಂದೂಡುವಂತೆ ಕೋರಿ ಶಿವಕುಮಾರ್ ಪರ ವಕೀಲರು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.