ತಿರುವನಂತಪುರ, ಜು 01 (DaijiworldNews/MS): ಇಲ್ಲಿನ ಆಡಳಿತಾರೂಢ ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿ ಮೇಲೆ ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ಎಸೆದಿದ್ದು, ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ರಾತ್ರಿ 11.30ರ ಸುಮಾರಿಗೆ ಬೈಕಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಗರದ ಹೃದಯಭಾಗದಲ್ಲಿರುವ ಎಕೆಜಿ ಸೆಂಟರ್ ಮೇಲೆ ಸ್ಫೋಟಕ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನಾ ಸ್ಥಳ ಮತ್ತು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸಹ ತಪಾಸಣೆ ನಡೆಸಿದೆ.
ಎಕೆಜಿ ಸೆಂಟರ್ನ ಅಧಿಕೃತ ಮಾಧ್ಯಮ ಗುಂಪಿನ ಮೂಲಕ ಸಿಪಿಐ(ಎಂ) ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ವ್ಯಕ್ತಿಯೊಬ್ಬ ಮೋಟಾರ್ ಬೈಕ್ನಲ್ಲಿ ಸ್ಥಳಕ್ಕೆ ಆಗಮಿಸಿ ಕಟ್ಟಡದ ಮೇಲೆ ಸ್ಫೋಟಕ ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಸ್ಫೋಟಕ ಎಕೆಜಿ ಕೇಂದ್ರದ ಕಲ್ಲಿನ ಗೋಡೆಗೆ ತಗುಲಿದೆ ಎನ್ನಲಾಗಿದೆ.
ಸಿಪಿಐ(ಎಂ)ನ ವಿದ್ಯಾರ್ಥಿ ಕಾರ್ಯಕರ್ತರು , ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಯನಾಡಿನ ಕಚೇರಿಯನ್ನು ಧ್ವಂಸಗೊಳಿಸಿದಾಗಿನಿಂದ ಎರಡು ಪಕ್ಷಗಳು ಕಚ್ಚಾಟವನ್ನು ನಡೆಸುತ್ತಿವೆ