ಮುಂಬೈ, ಜೂ 30 (DaijiworldNews/SM): ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ಎರಡು ವಾರಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ತಾರ್ಕಿಕ ಅಂತ್ಯ ಸಿಕ್ಕಿದಂತಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ 31 ತಿಂಗಳ ಮಹಾ ಆಘಾದಿ ಸರ್ಕಾರ ಪತನವಾಗಿ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿನ ನೂತನ ಶಿವಸೇನಾ-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜಭವನದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಏಕನಾಥ್ ಶಿಂಧೆ ನೂತನ ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪ್ರಮಾಣ ವಚನ ಬೋಧಿಸಿದರು.
ಈ ಮೂಲಕ ಒಂದು ಕಾಲದಲ್ಲಿ ಆಟೋ ಡ್ರೈವರ್ ಆಗಿದ್ದ ಏಕನಾಥ್ ಶಿಂಧೆ, ಶಿವಸೇನಾ ಮುಖ್ಯಸ್ಥ ಹಾಗೂ ತನ್ನ ಗುರು ಉದ್ಧವ್ ಠಾಕ್ರೆಯನ್ನು ರಾಜಕಾರಣದಲ್ಲಿ ಹಿಂದಿಕ್ಕಿ ಇದೀಗ ಮಹಾರಾಷ್ಟ್ರದ ಸಿಎಂ ಆಗಿ ಹೊರಹೊಮ್ಮಿದ್ದಾರೆ.
ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಚಿವರಾಗಿದ್ದ ಶಿಂಧೆ, ಜನ ಹಾಗೂ ಕಾರ್ಯಕ್ರಮ ಸಂಘಟಿಸುವ ಕೌಶಲ್ಯದೊಂದಿಗೆ ಹಂತ ಹಂತವಾಗಿ ರಾಜಕೀಯದಲ್ಲಿ ಉನ್ನತ ಹುದ್ದೆಗೇರುವಲ್ಲಿ ಯಶಸ್ವಿಯಾಗಿದ್ದಾರೆ.