ಬೆಂಗಳೂರು, ಜೂ 30 (DaijiworldNews/DB): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮುಂದಿನ ನಿರ್ಧಾರದ ಮೇಲೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಸದ್ಯದ ಪರಿಸ್ಥಿತಿ ಏನೆಂಬುದು ಬಹುಶಃ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಬಿಎಸ್ವೈ ಬೇರೆ ಪಕ್ಷ ಕಟ್ಟಿದ ಲೆಕ್ಕಾಚಾರ ಹಾಕುವುದರಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ. ಅವರ ಮುಂದಿನ ನಡೆ ಇವರ ಪರಿಸ್ಥಿತಿ ನಿರ್ಧಾರಕ್ಕೆ ಕಾರಣವಾಗಬಹುದು ಎಂದು ವ್ಯಂಗ್ಯವಾಡಿದರು.
ಒಂದೇ ಒಂದು ಸ್ಥಾನ ಇಲ್ಲದೆಯೂ ಜೆಡಿಎಸ್ ಗೆದ್ದಿದೆ. ವಿಧಾನ ಪರಿಷತ್ ಮತ್ತು ವಿಧಾನಸಭಾ ಚುನಾವಣೆಗಳು ಬೇರೆ ಬೇರೆ. ಎಷ್ಟೇ ಆಂತರಿಕ ಸಮೀಕ್ಷೆಗಳನ್ನು ರಾಷ್ಟ್ರೀಯ ಪಕ್ಷಗಳು ನಡೆಸಿದರೂ ನಮಗೆ ಯಾವುದೇ ಭಯ ಇಲ್ಲ. 123 ಸ್ಥಾನ ಗೆಲ್ಲುವ ನಮ್ಮ ಗುರಿಯಲ್ಲಿ ಕೆಲವೊಂದು ಸಮಸ್ಯೆಗಳಿವೆ. ಆದರೆ ಗುರಿ ತಲುಪುವುದೇ ನಮ್ಮ ಮುಖ್ಯ ಉದ್ದೇಶ ಎಂದರು.
ಜೆಡಿಎಸ್ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿ ಇದ್ದಾರೆಂಬ ಸುದ್ದಿಗಳ ಕುರಿತು ಉತ್ತರಿಸಿದ ಅವರು, ಕೆಲವರು ಅವರ ವಿಶ್ವಾಸದಲ್ಲಿ ಇರಬಹುದಾದರೂ ಅವರಲ್ಲೇ ಗೊಂದಲಗಳಿವೆ. ಆಷಾಢ ಮಾಸದ ಬಳಿಕ ಎಲ್ಲಾ ವಿಚಾರಗಳು ಗೊತ್ತಾಗಲಿದೆ ಎಂದು ತಿಳಿಸಿದರು. ಎಲ್ಲಾ ಕಡೆ ಮುಳುಗಿದ ಹಡಗಿನಂತೆ ಕಾಂಗ್ರೆಸ್ ಇದೆ. ಮುಳುಗಿದ ಹಡಗಿನಲ್ಲಿ ಹೋದರೆ ಯಾವುದೇ ಪ್ರಯೋಜನವಿಲ್ಲ ಎಂದು ಇದೇ ವೇಳೆ ಕಾಂಗ್ರೆಸ್ಗೆ ಟಾಂಗ್ ನೀಡಿದರು.