ಮುಂಬೈ, ಜೂ 30 (DaijiworldNews/DB): ಅಧಿಕಾರವೇ ಶಿವಸೇನೆಗಾಗಿ ಹುಟ್ಟಿದೆಯೇ ಹೊರತು ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ ಎಂಬುದು ಬಾಳಾ ಸಾಹೇಬ್ ಠಾಕ್ರೆಯವರ ಮಂತ್ರವಾಗಿತ್ತು. ಸ್ವಬಲದಿಂದ ಕೆಲಸ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯುತ್ತೇವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಬುಧವಾರ ಸಂಜೆ ರಾಜೀನಾಮೆ ಪತ್ರ ಸಲ್ಲಿಸುವ ವೇಳೆ ನಾವೆಲ್ಲ ಭಾವುಕರಾಗಿದ್ದೆವು. ಉದ್ದವ್ ಠಾಕ್ರೆ ಮಹಾರಾಷ್ಟ್ರದಲ್ಲಿ ಮಾಡಿದ ಜನಪರ ಕೆಲಸ ನೋಡಿ ಪ್ರತಿಯೊಬ್ಬರೂ ಅವರ ಮೇಲೆ ಅಗಾಧ ನಂಬಿಕೆ ಇರಿಸಿದ್ದರು. ಎಲ್ಲಾ ಜಾತಿ, ಧರ್ಮದ ಜನರು ಅವರನ್ನು ಒಪ್ಪಿಕೊಂಡಿದ್ದರು. ಸೋನಿಯಾ ಗಾಂಧಿ, ಶರದ್ ಪವಾರ್ ಅವರ ಮೇಲೆ ಇಟ್ಟ ನಂಬಿಕೆಗೆ ನಾವು ಆಭಾರಿಯಾಗಿದ್ದೇವೆ ಎಂದರು.
ಪತ್ರ ಚೌಲ್ ಭೂ ಹಗರಣ ಪ್ರಕರಣ ಸಂಬಂಧಿಸಿದಂತೆ ಜುಲೈ 1ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾರಿ ನಿರ್ದೇಶನಾಲಯದ ಕಚೇರಿಗೆ ನಾಳೆ ಭೇಟಿ ನೀಡುವುದಾಗಿ ತಿಳಿಸಿದರು.