ಮಣಿಪುರ, ಜೂ 30 (DaijiworldNews/MS): ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಮಣಿಪುರದ ನೋನಿ ಜಿಲ್ಲೆಯಲ್ಲಿ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು ಸ್ಥಳೀಯರು ಮತ್ತು ಸೇನಾ ಸಿಬ್ಬಂದಿ ಸೇರಿದಂತೆ ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಈಗಾಗಲೇ 6 ಶವಗಳನ್ನು ಹೊರತೆಗೆಯಲಾಗಿದೆ. 13 ಜನರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 50ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.
ಬುಧವಾರ ರಾತ್ರಿ ತೂಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಈ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಬಗ್ಗೆ ಚರ್ಚಿಸಲು ಮಣಿಪುರ ಸಿಎಂ ಬಿರೇನ್ ಸಿಂಗ್ ತುರ್ತು ಸಭೆ ಕರೆದಿದ್ದಾರೆ. ಭೂಕುಸಿತದಲ್ಲಿ ಗಾಯಗೊಂಡಿರುವವರಿಗೆ ನೋನಿಯಲ್ಲಿರೋ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಭೂಕುಸಿತದಿಂದಾಗಿ ಹಲವೆಡೆ ರಸ್ತೆ ಸಂಚಾರಕ್ಕೂ ಅಡ್ಡಿಯಾಗಿದೆ. ಪ್ರವಾಸಿಗರು ಈ ಮಾರ್ಗದಲ್ಲಿ ಸಂಚಾರ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ದುರ್ಘಟನೆ ಸಂಭವಿಸಿರುವ ಸ್ಥಳಕ್ಕೆ ಸಮೀಪದಲ್ಲೇ ನದಿ ಇದ್ದು, ಆ ಸ್ಥಳಕ್ಕೆ ಮಕ್ಕಳಿಗೆ ತೆರಳಲು ಅವಕಾಶ ಕೊಡದಂತೆ ಸೂಚಿಸಲಾಗಿದೆ. ಭೂಕುಸಿತದಿಂದಾದ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಆಂಬ್ಯುಲೆನ್ಸ್ ಹಾಗೂ ವೈದ್ಯರು ಸ್ಥಳದಲ್ಲೇ ಇದ್ದು ರಕ್ಷಣ ಕೆಲಸದಲ್ಲಿ ಕೈಜೋಡಿಸಿದ್ದಾರೆ