ನವದೆಹಲಿ, ಜೂ 30 (DaijiworldNews/DB): ಬಿಜೆಪಿ ನಮ್ಮೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ್ದಲ್ಲಿ ನಮಗೆ ಸಚಿವ ಸ್ಥಾನ ನೀಡಬೇಕು ಎಂಬುದಾಗಿ ಯಾವುದೇ ಚರ್ಚೆಯನ್ನೂ ಈವರೆಗೆ ಮಾಡಲಾಗಿಲ್ಲ. ಆದರೆ ಈ ಸಂಬಂಧ ಶೀಘ್ರ ಚರ್ಚಿಸಲಾಗುವುದು. ಹಾಗಾಗಿ ಈ ಸಂಬಂಧ ಅಧಿಕೃತವಾಗಿ ಹೇಳುವವರೆಗೂ ಯಾವುದೇ ವದಂತಿಗಳನ್ನು ನಂಬದಿರಿ ಎಂದು ಬಂಡಾಯ ನಾಯಕ ಏಕನಾಥ ಶಿಂಧೆ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯೊಂದಿಗೆ ಯಾವುದೇ ಸಚಿವ ಹುದ್ದೆಗಳಿಗಾಗಿ ಚರ್ಚೆ ನಡೆಸಿಲ್ಲ. ಆದರೆ, ಅಂತಹ ಚರ್ಚೆಗಳು ಮುಂದೆ ನಡೆಯುತ್ತದೆ. ಹಾಗಾಗಿ ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿಗಳು ಕೇವಲ ವದಂತಿಗಳಾಗಿದ್ದು, ಅವುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ.
ಈ ಟ್ವೀಟ್ ಮಾಡುವುದಕ್ಕೂ ಕೆಲ ನಿಮಿಷಗಳ ಹಿಂದೆಯಷ್ಟೇ ಅವರು ಹೇಳಿಕೆ ನೀಡಿ, ಮಹಾರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಹಾಗೂ ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆಯವರ ಹಿಂದುತ್ವದ ಕಲ್ಪನೆ ಮತ್ತು ಸೇನೆಯ ಹಿರಿಯ ನಾಯಕ ದಿ. ಆನಂದ್ ಡಿಘೆ ಅವರ ಬೋಧನೆಯಾಧಾರಿತವಾಗಿ ಶಾಸಕರ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುವುದೇ ಬಂಡಾಯ ಗುಂಪಿನ ಪ್ರಮುಖ ಉದ್ದೇಶವಾಗಿದೆ ಎಂದಿದ್ದರು.
ಬುಧವಾರ ರಾತ್ರಿ ವೇಳೆಗೆ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ದವ್ ಠಾಕ್ರೆಯವರು ರಾಜೀನಾಮೆ ಘೋಷಿಸಿ ಬಳಿಕ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಮುಂದಿನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರಿಯುವಂತೆ ಉದ್ದವ್ ಠಾಕ್ರೆ ಅವರಿಗೆ ಈ ವೇಳೆ ರಾಜ್ಯಪಾಲರು ಸೂಚಿಸಿದ್ದರು. ಇದಾದ ಬಳಿಕ ಅಸ್ಸಾಂನಲ್ಲಿದ್ದ ರೆಬೆಲ್ ಶಾಸಕರು ಗೋವಾಕ್ಕೆ ತೆರಳಿದ್ದು, ಅಲ್ಲಿ ಇಂದು ಸಭೆ ಸೇರುವ ಸಾಧ್ಯತೆ ಇದೆ. ಈ ಸಭೆ ಮುಗಿದ ಬಳಿಕ ಎಲ್ಲಾ ಬಂಡಾಯ ಶಾಸಕರು ಏಕನಾಥ ಶಿಂಧೆ ನೇತೃತ್ವದಲ್ಲಿ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆಯೂ ನಿಚ್ಚಳವಾಗಿದೆ. ಈ ನಡುವೆ ಸರ್ಕಾರ ರಚನೆಗೆ 170 ಶಾಸಕರ ಬೆಂಬಲವಿದೆ ಎಂಬುದಾಗಿ ಬಿಜೆಪಿ ಹೇಳಿಕೊಂಡಿದೆ. ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ಸಂಜೆಯೇ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹಾರಾಷ್ಟ್ರ ಬಿಜೆಪಿಯು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮಾತನಾಡಿರುವ ವೀಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಹೊಸ ಮಹಾರಾಷ್ಟ್ರ ನಿರ್ಮಾಣಕ್ಕಾಗಿ ನಾನು ಮತ್ತೆ ಬರುತ್ತೇನೆ’ ಎಂದು ಫಡ್ನವೀಸ್ ಅವರು ಹೇಳಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿರುವುದರಿಂದ ಏಕನಾಥ ಶಿಂಧೆ ಅವರು ಉಪ ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.