ಮುಂಬೈ, ಜೂ 30 (DaijiworldNews/DB): ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗುತ್ತಿದ್ದಂತೆ ಕೇಸರಿ ಪಕ್ಷದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಉದ್ದವ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಹುದ್ದೆಗೇರುವುದು ಖಚಿತವಾಗಿದೆ.
ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬುಧವಾರ ರಾತ್ರಿಯಿಂದಲೇ ಬಿಜೆಪಿಯ ಸಂಸದರು, ಶಾಸಕರು ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದು, ಪರಸ್ಪರ ಶುಭಾಶಯ ಕೋರಿದ್ದಾರೆ. ಇಂದು ಮುಂಬೈನಲ್ಲಿ ಸಭೆ ಸೇರುವಂತೆ ಬಿಜೆಪಿಯ ಎಲ್ಲಾ ಶಾಸಕರಿಗೆ ಬಿಜೆಪಿ ಸೂಚಿಸಿದೆ. ಅಲ್ಲದೆ, ಈ ಸಭೆಯಲ್ಲಿ ಫಡ್ನವೀಸ್ ಮತ್ತು ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ಮುಂದಿನ ನಡೆಗಳನ್ನು ನಿರ್ಧರಿಸಲಿದ್ದಾರೆಂದು ಬಿಜೆಪಿ ಹೇಳಿರುವ ಕಾರಣ ಇಂದಿನ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ನಡುವೆ ಕಳೆದ ಎರಡುವ ವರ್ಷಗಳಿಂದ ತಾನು ಸದನಕ್ಕೆ ಮತ್ತೆ ಮರಳುತ್ತೇನೆ ಎಂದು ಹೇಳಿದ ಫಡ್ನವೀಸ್ ಮತ್ತೆ ಮಹಾ ಸಿಎಂ ಆಗಿ ಬರುತ್ತಾರೆ. ಅವರು ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬುದಾಗಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ ಪಾಟೀಲ ಹೇಳಿದ್ದಾರೆ.
ಗುರುವಾರ ರಾತ್ರಿಯೇ ಬಂಡಾಯ ಶಾಸಕರೆಲ್ಲರೂ ಅಸ್ಸಾಂನಿಂದ ಗೋವಾದ ರೆಸಾರ್ಟ್ಗೆ ಬಂದಿದ್ದು, ತಮ್ಮ ಮುಂದಿನ ರಾಜಕೀಯ ಜೀವನದ ಕುರಿತು ಇಲ್ಲಿ ಚರ್ಚಿಸುವ ಸಲುವಾಗಿ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಠಾಕ್ರೆ ರಾಜೀನಾಮೆಯಿಂದಾಗಿ ಬಂಡಾಯ ಶಾಸಕರಲ್ಲಿ ಕೆಲವರಿಗೆ ಅಸಮಾಧನವೂ ತಲೆದೋರಿದೆ ಎನ್ನಲಾಗುತ್ತಿದೆ.