ನವದೆಹಲಿ, ಜೂ 30 (DaijiworldNews/DB): ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ಹಯಾ ಲಾಲ್ ಅವರ ಹತ್ಯೆಯ ಆರೋಪಿ ಗೌಸ್ ಮೊಹಮ್ಮದ್ ಭಯೋತ್ಪಾದನಾ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳಿದ್ದ ಮತ್ತು ಉಗ್ರ ಸಂಘಟನೆಯ ಸ್ಲೀಪರ್ ಸೆಲ್ ಆಗಿ ಭಾರತದಲ್ಲಿ ನೆಲೆಸಿದ್ದ ಎಂಬ ಆತಂಕಕಾರಿ ಮಾಹಿತಿ ತನಿಖಾ ಸಂಸ್ಥೆಗಳಿಗೆ ಗೊತ್ತಾಗಿದೆ. ಅಲ್ಲದೆ, ವಿವಿಧ ಸಂಪರ್ಕ ಸಂಖ್ಯೆಗಳ ಮೂಲಕ ಪಾಕಿಸ್ತಾನ ಮೂಲದ ಭಯೋತ್ಪಾದಕರೊಂದಿಗೆ ಆತ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದು, ಹಂತಕರ ಬಗ್ಗೆ ತನಿಖೆ ವೇಳೆ ಆತಂಕಕಾರಿ ಮಾಹಿತಿಗಳು ತನಿಖಾ ಸಂಸ್ಥೆಗೆ ಲಭ್ಯವಾಗುತ್ತಿವೆ. ಇಬ್ಬರು ಹಂತಿಕರು ಹತ್ಯೆ ಮಾಡಿದ ಬಳಿಕ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುವ ಯೋಜನೆಯನ್ನು ರೂಪಿಸಿಕೊಂಡಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ, ಇದಕ್ಕೂ ಮುನ್ನ ಅವರು ರಾಜ್ ಸಮಂದ್ ಬಳಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇನ್ನು ಇಬ್ಬರಿಗೂ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕ ಇರುವುದು ಗೊತ್ತಾಗಿದೆ. ಹಂತಕರಲ್ಲಿ ಓರ್ವನಾದ ರಿಯಾಜ್ ಎಂಬಾತನು ಉದಯಪುರ ಮೂಲದ ರಿಯಾಸತ್ ಮತ್ತು ಅಬ್ದುಲ್ ರಜಾಕ್ ಮೂಲಕ ದಾವತ್ ಇ ಇಸ್ಲಾಮಿ ಎಂಬ ಪಾಕಿಸ್ತಾನ ಮೂಲದ ಉಗ್ರಸಂಘಟನೆಗೆ ಸೇರ್ಪಡೆಯಲಾಗಿದ್ದ. ಕರಾಚಿ ಮೂಲದ ಸಲ್ಮಾನ್ ಬಾಯ್, ಅಬ್ದುಲ್ ಇಬ್ರಾಹಿಂ ಜೊತೆಯೂ ಈತ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ವೃತ್ತಿಯಲ್ಲಿ ಟೈಲರ್ ಆಗಿದ್ದ ಕನ್ಹಯ್ಯ ಅವರ ಬಳಿ ಆರೋಪಿಗಳಿಬ್ಬರು ಗ್ರಾಹಕರ ಸೋಗಿನಲ್ಲಿ ಬಂದು ಆತನ ಕತ್ತು ಸೀಳಿ ಕೊಲೆ ಮಾಡಿದ್ದರು. ಓರ್ವ ಕೊಲೆ ಮಾಡುತ್ತಿದ್ದ ದೃಶ್ಯವನ್ನು ಇನ್ನೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದನಲ್ಲದೆ, ಇದಕ್ಕೂ ಮುನ್ನ ಆತ ತನ್ನ ಗುರಿ ಸಾಧಿಸಿ ವೀಡಿಯೋವೊಂದನ್ನು ವೈರಲ್ ಮಾಡುವುದಾಗಿ ಯಾರಲ್ಲೋ ಹೇಳುತ್ತಿರುವುದು ಕೂಡಾ ದಾಖಲಾಗಿತ್ತು. ತಾಲಿಬಾನ್ ಮಾದರಿಯಲ್ಲಿ ಈ ಕೊಲೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆರೋಪಿಗಳಿಬ್ಬರು ಹತ್ತು ದಿನ ಮೊದಲೇ ಕನ್ಹಯ್ಯಾ ಕೊಲೆಗೆ ಸಂಚು ರೂಪಿಸಿದ್ದರು.
ಕನ್ಹಯ್ಯಾ ಲಾಲ್ ಹತ್ಯೆ ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಜಬ್ಬಾರ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು.