ಡೆಹರಾಡೂನ್, ಜೂ 30 (DaijiworldNews/HR): ಭೂಕುಸಿತ ಸಂಭವಿಸಿ ಮಣ್ಣು ಮತ್ತು ಬಂಡೆಗಳು ವಾಹನದ ಮೇಲೆ ಬಿದ್ದು, ಓರ್ವ ಮಹಿಳೆ ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಕೇದರನಾಥ ರಸ್ತೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮಹಾರಾಷ್ಟ್ರದ ಅಹಮದ್ನಗರದ ಪುಷ್ಪಾ ಮೋಹನ್ ಬೋಂಸ್ಲೆ(62) ಎಂದು ಗುರುತಿಸಲಾಗಿದೆ.
ಈ ಕುರಿತು ರುದ್ರ ಪ್ರಯಾಗ್ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ಮಾಹಿತಿ ನೀಡಿದ್ದು, ಅಪಘಾತ ಸಂಭವಿಸಿದ ವಾಹನ ಕೇದರನಾಥದಿಂದ ಹಿಂದಿರುಗುತ್ತಿತ್ತು. ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದು, ಈ ವೇಳೆ ಮುಂಕಾಟಿಯ ಬಳಿ ಗುಡ್ಡದಿಂದ ಇದ್ದಕ್ಕಿದ್ದಂತೆ ಕೆಳಗೆ ಬಿದ್ದ ಬೃಹತ್ ಬಂಡೆಗಳು ಮತ್ತು ಮಣ್ಣು ವಾಹನದ ಮೇಲೆ ಬಿದ್ದಿದೆ ಎಂದರು.
ಇನ್ನು ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.