ಜೈಪುರ, ಜೂ 29 (DaijiworldNews/DB): ಇದೊಂಥರಾ ದುರಂತ ಅಂತ್ಯ ಕಂಡ ವಿಚಿತ್ರ ಪ್ರೇಮಕತೆ. ಮಗಳ ಗಂಡನ ಮೇಲೆ ಅತ್ತೆಗೆ, ಪತ್ನಿಯ ತಾಯಿಯ ಮೇಲೆ ಪತಿಗೆ ಪ್ರೀತಿಯಾಗಿ ಕೊನೆಗೆ ಅತ್ತೆ-ಅಳಿಯ ಇಬ್ಬರೂ ಒಟ್ಟಿಗೆ ಜೀವಿಸಲಾಗದೆ ನೇಣಿಗೆ ಶರಣಾದ ಘಟನೆ ರಾಜಾಸ್ಥಾನದ ಬಾರ್ಮರ್ ಗ್ರಾಮದಲ್ಲಿ ನಡೆದಿದೆ.
ಹೋತಾರಾಮ್ (22) ಮತ್ತು ದರಿಯಾ ದೇವಿ (38) ಕೈರವ್ ಆತ್ಮಹತ್ಯೆ ಮಾಡಿಕೊಂಡವರು. ಪ್ರೇಮಕ್ಕೆ ಕಣ್ಣಿಲ್ಲ ಎಂಬ ನಾಣ್ಣುಡಿ ಇದೆ. ಆದರೆ ಅತ್ತೆ ಮತ್ತು ಅಳಿಯನ ನಡುವೆ ಪ್ರೇಮಾಂಕುರವಾಗಿರುವ ಈ ಪ್ರಕರಣ ವಿಚಿತ್ರವಾಗಿದೆ. ದರಿಯಾ ದೇವಿಯ ಪುತ್ರಿಯನ್ನು ಕಳೆದ ವರ್ಷ ಹೋತಾರಾಮ್ಗೆ ವಿವಾಹ ಮಾಡಿಕೊಡಲಾಗಿದತ್ತು. ಮದುವೆಯಾದ ಬಳಿಕ ಹೋತಾರಾಮ್ಗೆ ಅತ್ತೆ ದರಿಯಾ ದೇವಿ ಮೇಲೆ ಪ್ರೇಮಾಂಕುರವಾಗಿದೆ. ಇತ್ತ ದರಿಯಾ ದೇವಿಗೂ ಮಗಳ ಗಂಡನ ಮೇಲೆ ಪ್ರೀತಿ ಹುಟ್ಟಿದೆ. ಇದರಿಂದ ಇಬ್ಬರೂ ಒಟ್ಟಿಗೆ ಬಾಳಲು ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ ಕ್ರಮೇಣ ಇವರಿಬ್ಬರ ಸಂಬಂಧದ ಬಗ್ಗೆ ಊರವರಿಗೆ ಅನುಮಾನ ಬಂದಿದ್ದು, ಗುಸುಗುಸು ಶುರುವಾಗಿದೆ. ಇದು ಗೊತ್ತಾದಾಗ ಇನ್ನು ಇಬ್ಬರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂಬುದು ಇಬ್ಬರಿಗೂ ಮನವರಿಕೆಯಾಗಿದೆ. ಆದರೆ, ಪರಸ್ಪರ ಬಿಟ್ಟಿರಲು ಸಾಧ್ಯವಿಲ್ಲ ಎಂದು ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಪಡಿತರ ಖರೀದಿ ನೆಪ ಹೇಳಿ ಅತ್ತೆ-ಅಳಿಯ ಇಬ್ಬರೂ ಮನೆಯಿಂದ ಹೊರ ಹೋಗಿ ಗ್ರಾಮದ ಸಮೀಪವಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರುದಿನ ಈ ವಿಷಯ ಮನೆಯವರಿಗೆ ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಪರ್ಬತ್ ಸಿಂಗ್ ತಿಳಿಸಿರುವುದಾಗಿ ವರದಿಯಾಗಿದೆ.