ಜೈಪುರ, ಜೂ 29 (DaijiworldNews/MS): ಸಮಾಜದಲ್ಲಿ ಭಯವನ್ನು ಹುಟ್ಟುಹಾಕಲು ರಾಜಸ್ಥಾನದ ಉದಯಪುರದಲ್ಲಿ ಟೈಲರ್ ನ್ನು ಬರ್ಬರ ಹತ್ಯೆ ಮಾಡಿದ್ದು, ಇಬ್ಬರು ಆರೋಪಿಗಳಿಗೂ ವಿದೇಶಿ ಶಕ್ತಿಯ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಹೇಳಿದ್ದಾರೆ.
ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು.
ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, " ಘಟನೆಯ ಕುರಿತು ಇಂದು ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಕಠಿಣ ಭಯೋತ್ಪಾದನಾ ನಿಗ್ರಹ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಈ ಕೃತ್ಯದ ಹಿಂದೆ ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶವಿರುವುದು ಖಚಿತವಾಗಿದೆ. ಹಂತಕರು ವಿದೇಶಿ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
"ಹೆಚ್ಚಿನ ತನಿಖೆಯನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮಾಡಲಿದ್ದು, ರಾಜಸ್ಥಾನ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ತನಿಖೆಗೆ ಕೈಜೋಡಿಸಲಿದೆ. ಪೊಲೀಸ್ ಇಲಾಖೆ ಆಡಳಿತವು ಇಡೀ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ತೊಂದರೆ ಸೃಷ್ಟಿಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಹತ್ಯೆಯು ಉದಯಪುರದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದ್ದು, ಶಾಂತಿಯನ್ನು ಕಾಪಾಡುವಂತೆ ಮುಖ್ಯಮಂತ್ರಿ ಅವರು ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಮಾತ್ರವಲ್ಲದೇ ಉದಯಪುರ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರ ಬಂಧಿಸಿದ ತೇಜಪಾಲ್, ನರೇಂದ್ರ, ಶೌಕತ್, ವಿಕಾಸ್ ಮತ್ತು ಗೌತಮ್ ಎಂಬ ಐವರು ಪೊಲೀಸರಿಗೆ ಅವಧಿಗೂ ಮುನ್ನ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.