ಉದಯಪುರ, ಜೂ 29 (DaijiworldNews/MS): ರಾಜಸ್ಥಾನದ ಉದಯಪುರದಲ್ಲಿ ಟೈಲರ್ನನ್ನು ಬರ್ಬರವಾಗಿ ಶಿರಚ್ಚೇಧ ಮಾಡಿದ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬೀಳುವ ಮೊದಲು ಬೈಕ್ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ ಕಾರಣಕ್ಕೆ ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ಎಂಬವರನ್ನು ಬರ್ಬರವಾಗಿ ಹತ್ಯೆಗೈದು ಕ್ರೂರಿಗಳು ಅಟ್ಟಹಾಸ ಮೆರೆದಿದ್ದರು. ಅಲ್ಲದೆ ತಮ್ಮ ಈ ಪೈಶಾಚಿಕ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಪ್ರಧಾನಿ ಮೋದಿಗೂ ಜೀವ ಬೆದರಿಕೆ ಹಾಕಿದ್ದರು.
ಕೊಲೆ ಮಾಡಿದ ಆರೋಪಿಗಳನ್ನು ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈ ಭೀಕರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಳ್ಳುವಂತೆ ಗೃಹ ಸಚಿವಾಲಯ (MHA) ನಿರ್ದೇಶನ ನೀಡಿದೆ.
ಪೂರ್ಣವಾಗಿ ಮುಖ ಮುಚ್ಚಿದ ಹೆಲ್ಮೆಟ್ ಹಾಕಿಕೊಂಡು ಬೈಕಿನಲ್ಲಿ ಹಂತಕರು ಪರಾರಿಯಾಗಿಲು ಯತ್ನಿಸುತ್ತಿದ್ದ ವೇಳೆ ರಾಜಸ್ಥಾನ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅವರುಗಳನ್ನು ಬಂಧಿಸಿದ್ದಾರೆ.
ಅವರಿಬ್ಬರನ್ನು ರಾಜ್ಸಮಂದ್ ಜಿಲ್ಲೆಯ ಭೀಮ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಂಧನ ಕಾರ್ಯಾಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕೋ-ಆರ್ಡಿನೇಟರ್ ನಿತಿನ್ ಅಗರ್ವಾಲ್ ಎಂಬವರು ಟ್ವೀಟ್ ಮಾಡಿದ್ದಾರೆ.