ಉದಯಪುರ, ಜೂ 29 (DaijiworldNews/MS): ರಾಜಸ್ಥಾನದ ಉದಯ್ಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಮಂಗಳವಾರ ಹಾಡಹಗಲೇ ಇಬ್ಬರು ವ್ಯಕ್ತಿಗಳು ಶಿರಚ್ಛೇದ ಮಾಡಿ ಹತ್ಯೆಗೈದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸುವಂತೆ ಗೃಹ ಸಚಿವಾಲಯ ಬುಧವಾರ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆ ಮತ್ತು ಅಂತರರಾಷ್ಟ್ರೀಯ ಸಂಬಂಧದ ಕುರಿತಂತೆ ಎನ್ಐಎ ಸಮಗ್ರ ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ
ಅಲ್ಲದೆ ಈ ಬಗ್ಗೆ ತನಿಖೆ ನಡೆಸುವಂತೆ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ದರ್ಜೆಯ ಅಧಿಕಾರಿ ಸೇರಿದಂತೆ ಎನ್ಐಎ ಯ ತಂಡವನ್ನು ಗೃಹ ಸಚಿವಾಲಯ ನಿಯೋಜಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್ವೊಂದನ್ನು ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಅಲ್ಲದೆ ಈ ಘಟನೆಯ ವಿಡಿಯೋ ಹರಿಯಬಿಟ್ಟ ದುಷ್ಕರ್ಮಿಗಳು ತಮ್ಮನ್ನು ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಿಕೊಂಡು , 'ತಲೆ ಕತ್ತರಿಸಿದ' ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್ ಶರ್ಮಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು
ಈ ಘಟನೆ ಖಂಡಿಸಿ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿವೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ.