ಪಾಣಿಪತ್, ಜೂ 29 (DaijiworldNews/DB): ಬೀದಿ ನಾಯಿಯೊಂದು ನವಜಾತ ಶಿಶುವನ್ನು ಎಳೆದೊಯ್ದು ಕಚ್ಚಿ ಗಾಯಗೊಳಿಸಿದ ಪರಿಣಾಮ ಶಿಶು ಸಾವನ್ನಪ್ಪಿದ ಆಘಾತಕಾರಿ ಘಟನೆ ಪಾಣಿಪತ್ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ಸೋಮವಾರ ಅಥವಾ ಮಂಗಳವಾರ ತಡರಾತ್ರಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ದಿನಗಳ ಗಂಡು ಶಿಶು ಆತನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಈ ವೇಳೆ ಬೀದಿ ನಾಯಿ ಆಸ್ಪತ್ರೆಗೆ ನುಗ್ಗಿದ್ದು, ಮಗುವನ್ನು ಹೊರಗಡೆ ಎಳೆದೊಯ್ದು ಕಚ್ಚಿ ಗಾಯಗೊಳಿಸಿದೆ. ಆದರೆ ರಾತ್ರಿಯಾಗಿದ್ದರಿಂದ ನಾಯಿ ಮಗುವನ್ನು ಎಳೆದೊಯ್ದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.
ನಾಯಿ ಮಗುವನ್ನು ಎಳೆದೊಯ್ದಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ಆದರೆ ಅದಾಗಲೇ ಶಿಶು ಮೃತಪಟ್ಟಿತ್ತು. ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ತಡರಾತ್ರಿ 2 ಗಂಟೆ ವೇಳೆಗೆ ಶಿಶುವನ್ನು ನಾಯಿ ಹೊರಗಡೆ ಎಳೆದೊಯ್ದಿರುವುದು ಗೊತ್ತಾಗಿದೆ. ಶಿಶುವಿನ ಕುಟುಂಬ ಉತ್ತರ ಪ್ರದೇಶ ಮೂಲದವರಾಗಿದ್ದು, ತಾಯಿ ಹೆರಿಗೆಗೆಂದು ಪಾಣಿಪತ್ನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.