ಪುಣೆ, ಜೂ 29 (DaijiworldNews/MS): ಸಾಂಗ್ಲಿಯಲ್ಲಿ ಪಶುವೈದ್ಯರ ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈವರೆಗೂ ಆತ್ಮಹತ್ಯೆ ಎಂದೇ ಹೇಳಲಾಗಿದ್ದ ಪ್ರಕರಣ ಇದೀಗ ಕೊಲೆ ಎಂಬುವುದು ಅನುಮಾನ ಹುಟ್ಟುಹಾಕಿದೆ. ಚಹಾಕ್ಕೆ ವಿಷ ಬೆರೆಸಿ ಹತ್ಯೆಗೈದು ಬಳಿಕ ಆತ್ಮಹತ್ಯೆಯಂತೆ ಬಿಂಬಿಸಲಾಗಿತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಏನಾಗಿತ್ತು?
ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಪಟ್ಟಣದಲ್ಲಿ ಎರಡು ಮನೆಗಳಲ್ಲಿ ಒಂಬತ್ತು ವ್ಯಕ್ತಿಗಳ ಶವಗಳು ಪತ್ತೆಯಾಗಿತ್ತು. ಮೃತರಲ್ಲಿ ಮಾಣಿಕ್ ಮತ್ತು ಪೋಪಟ್ ಯಲ್ಲಪಾ ವಾನ್ಮೋರ್ ಇಬ್ಬರು ಸಹೋದರಾಗಿದ್ದಾರೆ. ಮಾಣಿಕ್ ಮನೆಯಲ್ಲಿ ಆತನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿತ್ತು ಮಾಣಿಕ್ ಹಿರಿಯ ಸಹೋದರರಾಗಿದ್ದು ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪೋಪಟ್ ಅವರ ಮನೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿತ್ತು. ಮೃತರನ್ನು ಡಾ. ಮಾಣಿಕ್ ಯೆಲಪ್ಪ ವಾನ್ಮೋರೆ, ಅಕ್ತಾಯ್ವಾನ್ಮೋರ್ (ತಾಯಿ), ರೇಖಾ ಮಾಣಿಕ್ ವಾನೋರ್ (ಪತ್ನಿ), ಪ್ರತಿಮಾ ವಾನ್ಮೋರ್ (ಮಗಳು), ಆದಿತ್ಯ ವಾನ್ಮೋರ್ (ಮಗ) ಮತ್ತು ಪೋಪಟ್ ಯೆಲಪ್ಪ ವಾನ್ಮೋರ್ (ಶಿಕ್ಷಕ), ಅರ್ಚನಾ ವಾನ್ಮೋರ್ (ಪತ್ನಿ), ಸಂಗೀತಾ ವಾನ್ಮೋರ್ (ಮಗಳು), ಶುಭಂ ವಾನ್ಮೋರ್ (ಮಗ) ಎಂದು ಗುರುತಿಸಲಾಗಿತ್ತು
ಸಾಲ ಪಡೆದ ವನಮೋರೆ ಕುಟುಂಬದವರನ್ನು ಆರೋಪಿಗಳು ಸಾಲ ಮರುಪಾವತಿಸುವಂತೆ ವಿಪರೀತ ಕಿರುಕುಳ ನೀಡುತ್ತಿದ್ದರು.ಇವರ ಕಿರುಕುಳದ ಕಾರಣದಿಂದಲೇ ವನಮೋರೆ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಪೊಲೀಸರಿಗೆ ಎರಡೂ ಮನೆಗಳ ಹಿಂಬದಿಯ ಬಾಗಿಲು ಮಾತ್ರ ತೆರೆಯದೆ ಇರುವುದು ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೆ ಅಡುಗೆಮನೆಯಲ್ಲಿ ಚಹಾದ ಬೇಯಿಸಿದ ಪಾತ್ರೆಗಳು ಹಾಗೆ ಇದ್ದರೂ, ಅದನ್ನು ಕುಡಿದ ಲೋಟಗಳಿರಲಿಲ್ಲ, ಮಾತ್ರವಲ್ಲದೇ ಸಾಮೂಹಿಕ ಆತ್ಮಹತ್ಯೆಯಲ್ಲಿ ಕಂಡುಬರುವಂತೆ ಹೆಚ್ಚಾಗಿ ಕುಟುಂಬ ಸದಸ್ಯರ ಶವಗಳು ಒಂದೇ ಕಡೆ ಇರಲಿಲ್ಲ. ಪ್ರತಿ ಕೋಣೆಯಲ್ಲಿ ಒಂದರಂತೆ,ಇದಲ್ಲದೆ, ದೇಹಗಳು ಮನೆಯಾದ್ಯಂತ ಬಿದ್ದಿದ್ದವು.
ಇನ್ನು ಸೂಸೈಡ್ ನೋಟ್ ಕೂಡಾ ಅನುಮಾನ ಹುಟ್ಟಿಸುವಂತಿತ್ತು , ಸಾಮಾನ್ಯವಾಗಿ, ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸುವ ಮೂಲಕ ಆತ್ಮಹತ್ಯೆ ಟಿಪ್ಪಣಿ ಪ್ರಾರಂಭವಾಗುತ್ತದೆ. ಇದು ನಂತರ ಆತ್ಮಹತ್ಯೆಗೆ ತೆಗೆದುಕೊಂಡ ಕಾರಣಗಳೊಂದಿಗೆ ಕೊನೆಗೊಳ್ಳುತ್ತದೆ ಆದರೆ ಇಲ್ಲಿ ಎಲ್ಲವೂ ಅನುಮಾನವನ್ನು ಹುಟ್ಟುಹಾಕಿದವು. ಮೃತದೇಹಗಳು ಪತ್ತೆಯಾಗುವ ಹಿಂದಿನ ರಾತ್ರಿ ಇಬ್ಬರು ವ್ಯಕ್ತಿಗಳು ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿರುವ ಮಾಹಿತಿ ದೊರಕಿದಾಗ ಈ ಪ್ರಕರಣ ತಿರುವು ಪಡೆಯಿತು.ಸಾಲದ ಹಣ ಹಿಂತಿರುಗಿಸಿಲ್ಲ ಎಂಬ ಕಾರಣಕ್ಕೆ ಕುಟುಂಬದ ಸದಸ್ಯರಿಗೆ ಚಹಾದಲ್ಲಿ ವಿಷ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುಟುಂಬಕ್ಕೆ ಅಬ್ಬಾಸ್ ಬಾಗವಾನ್ (48) ಎಂಬ ಮಾಂತ್ರಿಕ, ನಿಧಿಗೆ ಸಿಗುವ ಅಮೀಷವನ್ನು ಹುಟ್ಟುಹಾಕಿ ಇದಕ್ಕಾಗಿ ಭಾರೀ ಮೊತ್ತದ ಹಣ ಕೇಳಿದ್ದ. ಆತನಿಗೆ ನೀಡಲೆಂದು ಈ ಕುಟುಂಬ ಹಲವರಿಂದ ದೊಡ್ಡ ಮೊತ್ತದ ಸಾಲ ಪಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊಂದಿರುವ 25 ಜನರ ಪೈಕಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಗ್ಲಿಯಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿಯ ಶವ ಪತ್ತೆ - ಆತ್ಮಹತ್ಯೆ ಶಂಕೆ