ಮುಂಬೈ, ಜೂ 28 (DaijiworldNews/MS): ಶಿವಸೇನೆಯಲ್ಲಿದ್ದ ಕೊಳಚೆ ಹೊರಹೋಗಿ ಪಕ್ಷ ಸ್ಚಚ್ಚವಾಗಿದೆ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಗುವಾಹಟಿಯ ಹೋಟೆಲ್ನಲ್ಲಿ ತಂಗಿರುವ ಪಕ್ಷದ ಬಂಡಾಯ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವು ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಮುಂಬೈನಲ್ಲಿ ಶಿವಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ, "ಅಸ್ಸಾಂ ರಾಜ್ಯದ ಹಲವು ಭಾಗಗಳು ಪ್ರವಾಹವನ್ನು ಎದುರಿಸುತ್ತಿರುವಾಗ ಪಕ್ಷದ ಬಂಡುಕೋರರು ಗುವಾಹಟಿಯಲ್ಲಿ ’ಎಂಜಾಯ್ ’ ಮಾಡುತ್ತಿದ್ದು, ಇವರೆಲ್ಲರೂ ಪಕ್ಷಕ್ಕೆ ’ದ್ರೋಹ’ ಬಗೆದಿದ್ದಾರೆ " ಎಂದು ಆರೋಪಿಸಿದ್ದಾರೆ.
ಬಂಡಾಯ ಗುಂಪಿನ ನಾಯಕ ಏಕನಾಥ್ ಶಿಂಧೆ ಅವರಿಗೆ ಮೇ ತಿಂಗಳಿನಲ್ಲಿ ಮುಖ್ಯಮಂತ್ರಿ ಹುದ್ದೆಯ ಆಫರ್ ನೀಡಲಾಗಿತ್ತು ಆದರೆ ಅವರು ನಾಟಕವಾಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಕಾಂಗ್ರೆಸ್ ಮತ್ತು ಎನ್ಸಿಪಿ ನಮಗೆ ದ್ರೋಹ ಮಾಡುತ್ತವೆ ಎಂದು ಹಲವರು ನಮಗೆ ಹೇಳಿದ್ದರು. ಆದರೆ ಇಲ್ಲಿ ನಮ್ಮ ಜನರೇ ನಮಗೆ ದ್ರೋಹವೆಸಗಿದ್ದಾರೆ.. ವಾಚ್ಮನ್ಗಳು, ರಿಕ್ಷಾ ಚಾಲಕರು ಮತ್ತು ಪಾನ್ ಅಂಗಡಿಯವರಾಗಿದ್ದ ಅನೇಕರನ್ನು ನಾವು ಶಾಸಕರನ್ನಾಗಿ ಮಾಡಿ ಅವರನ್ನು ಮಂತ್ರಿ ಮಾಡಿದ್ದೇವೆ. ಮೇ 20 ರಂದು ಉದ್ಧವ್ ಠಾಕ್ರೆ ಅವರು ಏಕನಾಥ್ ಶಿಂಧೆ ಅವರಿಗೆ ಸಿಎಂ ಸ್ಥಾನವನ್ನು ನೀಡಿದರೂ ಅವರು ನಾಟಕ ಮಾಡಿದರು ಎಂದು ಆದಿತ್ಯ ಠಾಕ್ರೆ ದೂರಿದ್ದಾರೆ.