ಮುಂಬೈ, ಜೂ 28 (DaijiworldNews/MS): ಶಾಪೂರ್ಜಿ ಪಾಲೋನಜಿ ಗ್ರೂಪ್ನ ಮುಖ್ಯಸ್ಥರಾಗಿದ್ದ ಉದ್ಯಮಿ ಪಾಲೋನಜಿ ಮಿಸ್ತ್ರಿ ಅವರು 93 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾಗಿದ್ದಾರೆ. 150 ವರ್ಷಗಳಿಗೂ ಹೆಚ್ಚು ಹಳೆಯದಾದ, ಶಪೂರ್ಜಿ ಪಲ್ಲೊಂಜಿ ಗ್ರೂಪ್ ಭಾರತದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.
ಕೈಗಾರಿಕೋದ್ಯಮಿಯಾಗಿ ಅವರ ಕೊಡುಗೆಗಳನ್ನು ಪರಿಗಣಿಸಿ ಭಾರತ ಸರ್ಕಾರವು 2016ರಲ್ಲಿ ಪಾಲೋನಜಿ ಮಿಸ್ತ್ರಿ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ.
ಗುಜರಾತ್ನ ಪಾರ್ಸಿ ಕುಟುಂಬದಲ್ಲಿ ಜನಿಸಿದ ಪಾಲೋನಜಿ ದೇಶದ ಹಿರಿಯ ಸಿರಿವಂತ ವ್ಯಕ್ತಿಯಾಗಿಯೂ ಹೆಸರಾಗಿದ್ದರು. ಫೋರ್ಬ್ಸ್ ಇತ್ತೀಚಿನ ಮಾಹಿತಿಯ ಪ್ರಕಾರ, ಪಾಲೋನಜಿ ಅವರ ಒಟ್ಟು ಸಂಪತ್ತು ₹1 ಲಕ್ಷ ಕೋಟಿಗೂ ಅಧಿಕ. ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 125ನೇ ಸ್ಥಾನದಲ್ಲಿದ್ದಾರೆ. ಟಾಟಾ ಸನ್ಸ್ನಲ್ಲಿ ಶೇಕಡ 18.4ರಷ್ಟು ಪಾಲುದಾರಿಕೆ ಹೊಂದಿದ್ದಾರೆ. ಮಿಸ್ತ್ರಿಯವರ ಹಿರಿಯ ಮಗ, ಶಪೂರ್ಜಿ ಮಿಸ್ತ್ರಿ ಅವರು ಶಾಪೂರ್ಜಿ ಪಾಲೋನಜಿ ಮತ್ತು ಕಂಪನಿ ಪ್ರೈ.ಲಿ.ನ ಅಧ್ಯಕ್ಷರಾಗಿದ್ದಾರೆ.
1865ರಲ್ಲಿ ಸ್ಥಾಪನೆಯಾದ ಶಾಪೂರ್ಜಿ ಪಾಲೋನಜಿ ಸಮೂಹವು ಎಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಜಲ, ಇಂಧನ ಹಾಗೂ ಹಣಕಾಸು ಸೇವೆಗಳನ್ನು ನೀಡುತ್ತಿದೆ. 50 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಕಿರಿಯ ಮಗ ಸೈರಸ್ ಮಿಸ್ತ್ರಿ, ಇಬ್ಬರು ಪುತ್ರಿಯರಾದ ಲೈಲಾ ಮಿಸ್ತ್ರಿ ಮತ್ತು ಆಲೂ ಮಿಸ್ತ್ರಿ ಅವರನ್ನು ಅಗಲಿದ್ದಾರೆ.