ಬೆಂಗಳೂರು, ಜೂ 27 (DaijiworldNews/DB): ಆಪರೇಷನ್ ಕಮಲ ಬಿಜೆಪಿಯ ಅಜೆಂಡಾ. ಶೀಘ್ರ ಇಂತಹ ಸರ್ಕಾರಕ್ಕೆ ಜನರು ಇತಿಶ್ರೀ ಹಾಡುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿ ರಚಿಸಿದ ಸರ್ಕಾರ ಈಗ ಹೇಗೆ ಸಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಮಹಾರಾಷ್ಟ್ರದಲ್ಲಿಯೂ ಬಹಿರಂಗ ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರಜಾಪಸತ್ತಾತ್ಮಕ ಸರ್ಕಾರವನ್ನು ಅಸ್ತಿರಗೊಳಿಸುವ ಪ್ರಯತ್ನ ಬಿಜೆಪಿಯವರದ್ದು ಎಂದು ಕಿಡಿಕಾರಿದರು.
ಜನರಿಂದ ನೇರ ಆಯ್ಕೆಯಾಗಿ ಬಂದು ಸರ್ಕಾರ ರಚಿಸಲಿ. ಅದು ಬಿಟ್ಟು ಅಡ್ಡದಾರಿ ಹಿಡಿದು ಸರ್ಕಾರ ರಚಿಸುವುದು ಯಾಕಾಗಿ ಎಂದು ಪ್ರಶ್ನಿಸಿದರು.
ದಲಿತ ಸಿಎಂ ಘೋಷಿಸುವಂತೆ ಕಾಂಗ್ರೆಸ್ಗೆ ಬಿಜೆಪಿ ಒತ್ತಾಯಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಯಾಕೆ ದಲಿತರನ್ನು ಸಿಎಂ ಮಾಡಿಲ್ಲ. ಅವರು ಘೋಷಿಸಲಿ. ಯಡಿಯೂರಪ್ಪ ನಂತರ ಲಿಂಗಾಯತರ ಬದಲಾಗಿ ದಲಿತರಿಗೆ ಸಿಎಂ ಸ್ಥಾನ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಲ್ಲಿ ಯಾರನ್ನು ಸಿಎಂ ಮಾಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಿದ್ದರಾಮಯ್ಯ ಏನೇ ನಿರ್ಣಯ ಮಾಡಿದರೂ ಅದರಲ್ಲಿ ಸ್ಪಷ್ಟತೆ ಇರುತ್ತದೆ. ಅವರು ಪಕ್ಷಕ್ಕೆ ಶಕ್ತಿಯಿದ್ದಂತೆ ಎಂದು ಇದೇ ವೇಳೆ ತಿಳಿಸಿದರು.
ನಾನೇ ಮುಂದಿನ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಾರೆಂಬುದನ್ನು ನಾವೇ ಘೋಷಣೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅದನ್ನು ಜನ ತೀರ್ಮಾನಿಸುತ್ತಾರೆ. ಚುನಾವಣೆಯಲ್ಲಿ 125 ಸ್ಥಾನ ಬಾರದಿದ್ದರೆ ಸಿಎಂ ಆಗುವುದು ಹೇಗೆ ಎಂದು ಲೇವಡಿ ಮಾಡಿದರು.