ಮುಂಬೈ, ಜೂ 27 (DaijiworldNews/DB): ಮಹಾರಾಷ್ಟ್ರ ಬಂಡಾಯ ಶಾಸಕರ ಅನರ್ಹತೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ರೆಬೆಲ್ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಬಂಡಾಯ ಶಾಸಕರನ್ನು ಪಕ್ಷದಿಂದ ಅನರ್ಹಗೊಳಿಸುವ ನಿರ್ಧಾರಕ್ಕೆ ಸಿಎಂ ಉದ್ದವ್ ಠಾಕ್ರೆ ಅವರು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಸುಪ್ರಿಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಶಾಸಕರ ಅನರ್ಹತೆ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಿದೆ. ಮಹಾ ಸರ್ಕಾರ ಮತ್ತು ಉಪ ಸಭಾಧ್ಯಕ್ಷರಿಗೆ ಕೋರ್ಟ್ ನೊಟೀಸ್ ಜಾರಿ ಮಾಡಿದ್ದು, ಮುಂದಿನ ಐದು ದಿನಗಳೊಳಗಾಗಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನ ಜುಲೈ 11ಕ್ಕೆ ಕೋರ್ಟ್ ನಿಗದಿಪಡಿಸಿದೆ.
ಏಕನಾಥ್ ಶಿಂಧೆ ಮತ್ತು ಇತರ 15 ಮಂದಿ ಬಂಡಾಯ ಶಾಸಕರ ವಿರುದ್ಧ ಉಪಸಭಾಧ್ಯಕ್ಷ ನರಹರಿ ಜಿರ್ವಾಲ್ ಅವರು ನೀಡಿದ ಅನರ್ಹತೆ ನೋಟಿಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.