ಮೈಸೂರು, ಜೂ 27 (DaijiworldNews/DB): ಮಾಜಿ ಸಿಎಂ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದ ಪತನದ ವೇಳೆ ನಡೆದ ವಿದ್ಯಾಮಾನಗಳನ್ನಾಧರಿಸಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬರೆಯುತ್ತಿರುವ 'ಬಾಂಬೆ ಫೈಲ್ಸ್' ಪುಸ್ತಕ ಶೀಘ್ರ ಲೋಕಾರ್ಪಣೆಗೊಳ್ಳಲಿದೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಚ್. ವಿಶ್ವನಾಥ್, 'ಬಾಂಬೆ ಡೇಸ್' ಎಂದು ಪುಸ್ತಕದ ಹೆಸರಿತ್ತು. ಆದರೀಗ ಕಾಶ್ಮೀರ್ ಫೈಲ್ಸ್ ರೀತಿಯಲ್ಲಿ 'ಬಾಂಬೆ ಫೈಲ್ಸ್' ಎಂಬುದಾಗಿ ಪುಸ್ತಕದ ಹೆಸರನ್ನು ಬದಲಾಯಿಸಲಾಗಿದೆ. ಇದು ಯಾವುದೇ ಬಾಂಬ್ ಅಲ್ಲ, ವಾಸ್ತವವಾಗಿದ್ದು, ಶೀಘ್ರ ಬಿಡುಗಡೆಗೊಳ್ಳಲಿದೆ ಎಂದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸುವ ಪಠ್ಯದ ಬದಲಾಗಿ ಹಳೆ ಪುಸ್ತಕವನ್ನೇ ಮುಂದುವರಿಸಬೇಕು. ಮಕ್ಕಳ ವಿದ್ಯೆಯ ವಿಚಾರದಲ್ಲಿ ಸರ್ಕಾರ ಹಠದ ಧೋರಣೆ ತಾಳದೇ ಶಿಕ್ಷಣ ವ್ಯವಸ್ಥೆ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು ಎಂದವರು ಆಗ್ರಹಿಸಿದರು.
ನಾಡಿನ ದೊಡ್ಡ ಸಾಹಿತಿಯಾಗಿರುವ ಎಸ್.ಎಲ್. ಭೈರಪ್ಪ ಅವರು ಬಿಜೆಪಿ ವಕ್ತಾರರಂತೆ ಮಾತನಾಡುವುದು ಅವರಿಗೆ ಶೋಭೆಯಲ್ಲ. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಎದ್ದು ಕಾಣುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಹಾರಾಷ್ಟ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಲು ಸಿಎಂ ಉದ್ದವ್ ಠಾಕ್ರೆ ಅವರ ನಡವಳಿಕೆಯೇ ಕಾರಣ. ಸರ್ವಾಧಿಕಾರಿಗಳಾಗಿ ಸಿಎಂಗಳು ಮೆರೆದರೆ ಹೀಗೇ ಆಗುವುದು. ರಾಜ್ಯದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯನವರ ದರ್ಪದಿಂದಾಗಿ ಶಾಸಕರು ದಂಗೆ ಎದ್ದಿರುವ ಉದಾಹರಣೆಯನ್ನು ನೀವು ನೋಡಿರಬಹುದು. ಶಾಸಕರ ಸ್ವಾಭಿಮಾನ ಕೆಣಕಿದರೆ ಇಂತಹ ಕ್ರಾಂತಿ ಸಾಮಾನ್ಯ ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.