ಶಿವಮೊಗ್ಗ, ಜೂ 27 (DaijiworldNews/DB): ರಾಜ್ಯದಲ್ಲಿ ಒಂದೇ ಮುಖ್ಯಮಂತ್ರಿ ಸ್ಥಾನ ಇದ್ದು, ಅದನ್ನು ಬಿಜೆಪಿಯವರೇ ತುಂಬುತ್ತಾರೆ. ನಾನು ಸಿಎಂ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮುಂದಿನ ಸಿಎಂ ನಾನೇ ಎಂಬುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಒಂದೇ ಸಿಎಂ ಸ್ಥಾನ ರಾಜ್ಯದಲ್ಲಿರುವುದರಿಂದ ಒಬ್ಬರಿಗಿಂತ ಹೆಚ್ಚು ಮಂದಿ ಸಿಎಂ ಆಗುವುದು ಸಾಧ್ಯವಿಲ್ಲ. ನಾವೇ ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಮತ್ತು ಬಿಜೆಪಿಯವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದರು.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಹಿಂದಿರುವುದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಅವರ ಮನೆ ಮಕ್ಕಳನ್ನು ಅವರು ಸರಿಯಾಗಿಟ್ಟುಕೊಂಡರೆ ಬೇರೆ ಮನೆಗೆ ಹೋಗುವ ಪ್ರಯತ್ನವನ್ನು ಮಾಡುವುದಿಲ್ಲ. ಅವರ ಶಾಸಕರನ್ನು ಶಿಸ್ತುಬದ್ದವಾಗಿ ಇಟ್ಟುಕೊಳ್ಳಲಿ. ಮಹಾರಾಷ್ಟರದಲ್ಲಿ ಶಾಸಕರಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು. ಆದರೆ ಸಂಕಷ್ಟ ಒದಗಿ ಬಂದಾಗ ತಪ್ಪಿನ ಅರಿವಾಗಿದೆ ಎಂದು ತಿಳಿಸಿದರು.
ಪಕ್ಷಕ್ಕೆ ನಾವಾಗಿಯೇ ಯಾರೂ ಬನ್ನಿ ಎಂದು ಕರೆಯುವುದಿಲ್ಲ. ಆದರೆ ಅವರ ಬರುತ್ತೇವೆಂದರೆ ಖಂಡಿತಾ ಸೇರಿಸಿಕೊಳ್ಳುತ್ತೇವೆ. ಆರೆಸ್ಸೆಸ್ ಬಗ್ಗೆ ಬೈಯುವ ಚಾಳಿ ಸಿದ್ದರಾಮಯ್ಯನವರಿಗಿತ್ತು. ಈಗ ಕುಮಾರಸ್ವಾಮಿಗೂ ಆ ಚಾಳಿ ಬಂದಿದೆ. ಆರೆಸ್ಸೆಸ್ ಬಗ್ಗೆ ಮಾತನಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವೇ ಆಗುವುದಿಲ್ಲ ಎಂಬಂತಾಗಿದೆ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.