ಬರೇಲಿ (ಉತ್ತರ ಪ್ರದೇಶ), ಜೂ 27 (DaijiworldNews/DB): ಕರೆ ಸ್ವೀಕರಿಸದ್ದಕ್ಕೆ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಭಾವಿಸಿ 17 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ದೇವಿದಾಸ್ ಎಂಬವರ ಪುತ್ರಿ ಈ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಂಡ ದುರ್ದೈವಿ. ಕಾಲೇಜು ವಿದ್ಯಾರ್ಥಿನಿಯಾಗಿರುವ ಯುವತಿ ಅಲೋಕ್ನಗರದ ನಿವಾಸಿ ಸಂಚಿತ್ ಆರೋರಾ ಎಂಬಾತನನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಫೋನ್, ವಾಟ್ಸಾಪ್ನಲ್ಲಿ ಇಬ್ಬರ ಮಾತುಕತೆ ಮುಂದುವರಿದಿತ್ತು. ಈ ನಡುವೆ ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪವಾಗಿದ್ದು, ಸಂಚಿತ್ ಎಷ್ಟೇ ಕರೆ ಮಾಡಿದರೂ, ಯುವತಿ ಫೋನ್ ಸ್ವೀಕರಿಸಿರಲಿಲ್ಲ. ಅಲ್ಲದೆ ವಾಟ್ಸಾಪ್ ಮೆಸೇಜ್ಗೂ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಬೇಸತ್ತ ಸಂಚಿತ್ ನೀನು ಪ್ರತಿಕ್ರಿಯಿಸದೇ ಹೋದಲ್ಲಿ ನಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ವಾಟ್ಸಾಪ್ ಸಂದೇಶ ರವಾನಿಸಿದ್ದಾನೆ. ಇದನ್ನು ನೋಡಿದ ಯುವತಿ ಮರುದಿನ ಆತನಿಗೆ ಕರೆ ಮಾಡಿದ್ದಾಳೆ. ಸುಮಾರು ನಲುವತ್ತಕ್ಕೂ ಹೆಚ್ಚು ಬಾರಿ ಕರೆ ಮಾಡಿದರೂ ಆತ ಸ್ವೀಕರಿಸದ ಕಾರಣ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಿ ಯುವತಿ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ಸಾಯುವ ಮುನ್ನ ಸಾವಿಗೆ ಕಾರಣವನ್ನು ಹೇಳಿದ್ದಾಳೆ.
ಆದರೆ ಈ ನಡುವೆ ಯುವತಿ ಸಾವನ್ನಪಿರುವ ವಿಷಯ ಸಂಚಿತ್ಗೆ ಗೊತ್ತಿರಲಿಲ್ಲ. ನಾನು ಇತರ ಕೆಲಸದಲ್ಲಿ ಬ್ಯುಸಿ ಇದ್ದದ್ದರಿಂದಾಗಿ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ಆತ ಮರು ಸಂದೇಶ ಕಳುಹಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಯುವತಿ ಸಾವನ್ನಪ್ಪಿದ್ದಳು. ಇದೀಗ ಯುವತಿ ಪಾಲಕರು ಸಂಚಿತ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.