ನವದೆಹಲಿ, ಜೂ 27 (DaijiworldNews/MS): ಅಗ್ನಿಪಥ್ ನೇಮಕಾತಿಗೆ ಸಂಬಂಧಪಟ್ಟಂತೆ ವಿರೋಧ ವ್ಯಕ್ತಪಡಿಸಿ ದೇಶದ ವಿವಿಧೆಡೆ ಪ್ರತಿಭಟನೆ, ಗಲಾಟೆಗಳ ನಡುವೆ ಭಾರತೀಯ ವಾಯುಪಡೆಯು (IAF) ಅಗ್ನಿಪಥ್ ನೇಮಕಾತಿ ಯೋಜನೆಯಡಿ ಭಾನುವಾರದವರೆಗೆ 56,960 ಅರ್ಜಿಗಳನ್ನು ಸ್ವೀಕರಿಸಿದೆ.
ಕೇಂದ್ರ ಸರ್ಕಾರ ಜೂನ್ 14 ರಂದು ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿತ್ತು. ಈ ವೇಳೆ 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಸೇರಿಸಿಕೊಳ್ಳಲಾಗುವುದು ಬಳಿಕ ಶೇ. 25ರಷ್ಟು ಮಂದಿಯನ್ನು ಸೇವೆಯಲ್ಲಿ ಮುಂದುವರಿಸಲಾಗುವುದು ಎಂದು ಹೇಳಿತ್ತು. ಆದರೆ ಈ ಯೋಜನೆ ಘೋಷಣೆಯಾಗುತ್ತಿದ್ದಂತೆಯೇ ಇದರ ವಿರುದ್ಧ ದೇಶದ ನಾನಾ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದವು.
ಹೀಗಾಗಿ ಸರ್ಕಾರ ಜೂನ್ 16 ರಂದು ಈ ಯೋಜನೆಯಡಿಯಲ್ಲಿ ನೇಮಕಾತಿ ಮಾಡುವ ಗರಿಷ್ಠ ವಯೋಮಿತಿಯನ್ನು 2022 ನೇ ವರ್ಷಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತು ಮಾತ್ರವಲ್ಲದೆ ಕೇಂದ್ರ ಅರೆಸೈನಿಕ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅವರಿಗೆ ಆದ್ಯತೆ ನೀಡುವ ಕ್ರಮಗಳನ್ನು ಘೋಷಿಸಿತು.
ಐಎಎಫ್ ಅಗ್ನಿವೀರ್ ನೇಮಕಾತಿ 2022 ಜೂನ್ 24ರಂದು ಅಂದರೆ ಶುಕ್ರವಾರದಂದು ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಮೂರು ದಿನಗಳಲ್ಲಿ 56 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಐಎಎಫ್ ಸ್ವೀಕರಿಸಿದೆ. ಐಎಎಫ್ ಹೊರಡಿಸಿದ ಅಧಿಸೂಚನೆ ಪ್ರಕಾರ, ಭಾರತೀಯ ವಾಯುಪಡೆಗೆ 2022 ರ ಅಗ್ನಿವೀರ್ ನೇಮಕಾತಿ ಪರೀಕ್ಷೆಯನ್ನು ಜುಲೈ 2022 ರಲ್ಲಿ ನಡೆಸಲಾಗುವುದು ಅಂತ ತಿಳಿಸಿದೆ. ಅಗ್ನಿವೀರ್ ನೇಮಕಾತಿ 2022 ರ ನೋಂದಣಿ ಪ್ರಕ್ರಿಯೆಯು ಮುಗಿದ ನಂತರ ದಿನಾಂಕವನ್ನು ವಾಯುಪಡೆಯು ತಿಳಿಸಲಾಗುವುದು ಅಂತ ಹೇಳಿದೆ.
ಅಂದ ಹಾಗೇ ಅಗ್ನಿವೀರ್ ಯೋಜನಾ ಅಡಿಯಲ್ಲಿ ಐಎಎಫ್ ನೇಮಕಾತಿ 2022 ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜುಲೈ 5, 2022 ರ ಸಂಜೆ 5 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.