ಕೊಪ್ಪಳ, ಜೂ 27 (DaijiworldNews/DB): ನನ್ನನ್ನು ಕಂಡರೆ ಆರೆಸ್ಸೆಸ್ ಮತ್ತು ಕುಮಾರಸ್ವಾಮಿಯವರರಿಗೆ ಭಯ. ಅದಕ್ಕಾಗಿ ಪದೇ ಪದೇ ನನ್ನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ನನ್ನನ್ನು ಆರೆಸ್ಸೆಸ್ ಮತ್ತು ಜೆಡಿಎಸ್ ಟಾರ್ಗೆಟ್ ಮಾಡುವುದು ನನ್ನ ಮೇಲಿನ ಭಯದಿಂದಲೇ ಎಂದರು.
ನಾನೇ ಮುಂದಿನ ಸಿಎಂ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನ ಆಶೀರ್ವಾದ ಮಾಡದೇ ಇದ್ದರೆ ಸಿಎಂ ಕುರ್ಚಿಯಲ್ಲಿ ನಾವೇ ಹೋಗಿ ಕುಳಿತುಕೊಳ್ಳುವುದಕ್ಕೆ ಆಗುತ್ತದೆಯೇ? ರಾಜ್ಯದಲ್ಲಿ ಜೆಡಿಎಸ್ ಯಾವ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾದ ಮೇಲೆ ಆ ಪಕ್ಷ ಅಧಿಕಾರಕ್ಕೆ ಬರುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಆದರೆ ಅಧಿಕಾರ ಕಳೆದುಕೊಳ್ಳುವಂತೆ ಬಿಜೆಪಿ ಮಾಡುತ್ತಿದೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಲು ಅವರು ಯತ್ನಿಸುತ್ತಿದ್ದು, ಈ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದ ಅವರು, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಬಿಜೆಪಿಗರು ಮಾಡುತ್ತಿರುವುದು ಏನು? ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿರುವುದು ಕಪ್ಪು ಚುಕ್ಕೆ ಎನ್ನುವ ಇವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಧ್ಯಪ್ರದೇಶ ಸರ್ಕಾರ, ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಕಿತ್ತು ಹಾಕಿದ ಅವರ ಬಳಿ ಪಾಪದ ಹಣ ಇದೆ. ಶಾಸಕರನ್ನು 25- 30 ಕೋಟಿ ರೂ. ಕೊಟ್ಟು ಖರೀದಿ ಮಾಡುವುದೇ ಅವರ ಕೆಲಸ ಆಗಿ ಹೋಗಿದೆ. ಕೇಂದ್ರದಲ್ಲಿ ಅಧಿಕಾರ, ದುಡ್ಡು ಇರುವುದರಿಂದಲೇ ಕಾಂಗ್ರೆಸ್ ಸರ್ಕಾರವನ್ನು ಎಲ್ಲಾ ಕಡೆ ಬೀಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.