ಮುಂಬೈ, ಜೂ 27 (DaijiworldNews/DB): ಅಸ್ಸಾಂನ ಗುವಾಹಟಿಯಲ್ಲಿರುವ 40 ಬಂಡಾಯ ಶಾಸಕರ ಆತ್ಮಗಳು ಮೃತಪಟ್ಟಿದ್ದು ಅವರೆಲ್ಲರು ಜೀವಂತ ಶವಗಳಾಗಿದ್ದಾರೆ. 40 ಶವಗಳು ಅಸ್ಸಾಂನಿಂದ ಮಹಾರಾಷ್ಟ್ರಕ್ಕೆ ಬರಲಿವೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ರೆಬೆಲ್ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬಂಡಾಯವೆದ್ದ ಶಾಸಕರೆಲ್ಲ ಜೀವಂತ ಶವಗಳು. ಅವರ ದೇಹಗಳು ಮುಂಬೈಗೆ ಬರಲಿವೆ. ಎಲ್ಲಾ ದೇಹಗಳನ್ನು ನೇರವಾಗಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗುವುದು ಎಂದರು.
ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಬಂಡಾಯವೆದ್ದ ಶಾಸಕರು ಅಸ್ಸಾಂನ ಗುವಾಹಟಿಯ ಹೊಟೇಲ್ನಲ್ಲಿ ತಂಗಿದ್ದು, ಶಿವಸೇನಾ ಸರ್ಕಾರಕ್ಕೆ ಬಿಕ್ಕಟ್ಟು ತಂದೊಡ್ಡಿದ್ದಾರೆ. ಹೀಗಾಗಿ ಸಂಜಯ್ ರಾವತ್ ಬಂಡಾಯ ಶಾಸಕರ ವಿರುದ್ದ ನಿರಂತರ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಎಷ್ಟು ದಿನ ಅವರು ಗುವಾಹಟಿಯಲ್ಲಿ ಅಡಗಿಕೊಂಡಿರಲು ಸಾಧ್ಯ. ಒಂದಲ್ಲ ಒಂದು ದಿನ ಬರಲೇಬೇಕಲ್ಲವೇ? ಎಂದು ಭಾನುವಾರವಷ್ಟೇ ಟ್ವೀಟ್ ಮಾಡಿ ರಾವತ್ ಪ್ರಶ್ನಿಸಿದ್ದರು. ಶಿವಸೈನಿಕರನ್ನು ಬಂಡಾಯ ಶಾಸಕರ ವಿರುದ್ದ ಬೀದಿಗಿಳಿಸುವುದಾಗಿ ಶನಿವಾರ ಎಚ್ಚರಿಕೆ ನೀಡಿದ್ದರು. ಮುಖ್ಯಮಂತ್ರಿ ಉದ್ದವ್ ಠಾಕ್ರೆ ರಾಜೀನಾಮೆ ನೀಡುವುದಿಲ್ಲ, ಹೋರಾಟ ಮುಂದುವರಿಯಲಿದೆ ಎಂದಿದ್ದರು.