ಬೆಂಗಳೂರು, ಜೂ 27 (DaijiworldNews/DB): ಹಿಮಾಲಯಕ್ಕೆ ಏಕಾಂಗಿ ಚಾರಣ ಕೈಗೊಂಡಿದ್ದ ವೈದ್ಯರೋರ್ವರು ಒಂದು ವಾರದಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವುದರಿಂದ ಮನೆಯವರು ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಚಂದ್ರಮೋಹನ್ ಒಬ್ಬಂಟಿಯಾಗಿ ಹಿಮಾಲಯಕ್ಕೆ ಚಾರಣ ಹೋಗುವುದಕ್ಕಾಗಿ ಜೂನ್ 3ರಂದು ಬೆಂಗಳೂರಿಂದ ತೆರಳಿದ್ದರು. ಜೂನ್ 20ರವರೆಗೆ ಇವರ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿತ್ತು. ಆದರೆ ಬಳಿಕ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು, ಒಂದು ವಾರದಿಂದ ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದಾಗಿ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.
ಹೀಗಾಗಿ ಚಂದ್ರಮೋಹನ್ ಅವರನ್ನು ಪತ್ತೆ ಹಚ್ಚುವಂತೆ ಕೋರಿ ಮನೆಯವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.