ತುಮಕೂರು, ಜೂ 27 (DaijiworldNews/DB): ತುಮಕೂರಿನಲ್ಲಿ ಜಯ ಗಳಿಸಿದರೆ ರಾಜ್ಯದಲ್ಲೇ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಇಲ್ಲಿ ಕಾಂಗ್ರೆಸ್ನ ಗೆಲುವು ಎರಡಂಕಿ ದಾಟಿದರೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಹೊರವಲಯದ ಡಾ. ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನವ ಸಂಕಲ್ಪ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಷ ಕಡೆದು ಅಮೃತವನ್ನು ಸಮುದ್ರ ಮಂಥನದಲ್ಲಿ ತೆಗೆದಂತೆ ಕೆಲಸ ಆಗಬೇಕು. ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಮುಖಂಡರು, ಕಾರ್ಯಕರ್ತರ ಪ್ರಯತ್ನದಿಂದ ಇಲ್ಲಿ ಗೆಲುವು ಸಾಧ್ಯ ಎಂದರು.
ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಕಟ್ಟುವಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಮನೆಗೆ ಬಂದ ಲಕ್ಷ್ಮಿಯನ್ನು ಒಳ ಕರೆದುಕೊಳ್ಳಿ. ಸೇವೆ, ತ್ಯಾಗದಿಂದ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ, ಜೆಡಿಎಸ್ನ ದುರಾಡಳಿತವನ್ನು ಜನ ನೋಡಿದ್ದಾರೆ. ಸಿದ್ದರಾಮಯ್ಯ ನೀಡಿರುವ ಜನಪರ ಆಡಳಿತವನ್ನು ಈಗಿನ ಡಬಲ್ ಎಂಜಿನ್ ಸರ್ಕಾರ ನೀಡುತ್ತಿಲ್ಲ ಎಂಬುದನ್ನು ಜನರಿಗೆ ಅರ್ಥ ಮಾಡಿಸಬೇಕು. ಸಮರ್ಥ ಆಡಳಿತ ನೀಡಿರುವ ಕಾಂಗ್ರೆಸ್ನ ಎಲ್ಲಾ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಮಂದಿಗೂ ತಲುಪಿಸಬೇಕು ಎಂದವರು ತಿಳಿಸಿದರು.