ಬೆಂಗಳೂರು, ಜೂ 26 (DaijiworldNews/DB): ಅಗ್ನಿಪಥ್ ದೇಶದ ಯುವಜನರ ಕನಸುಗಳ ಜೊತೆ ಚೆಲ್ಲಾಟ ನಡೆಸುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ತತ್ಕ್ಷಣ ಈ ಯೋಜನೆಯನ್ನು ಹಿಂಪಡೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನ ಹಿರಿಯ ಮುಖಂಡ ಪಲ್ಲಂ ರಾಜು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಅವೈಜ್ಞಾನಿಕವಾಗಿದೆ. ಇದು ಯುವಕರ ಕನಸು, ಆಕಾಂಕ್ಷೆಗಳ ಜೊತೆ ಚೆಲ್ಲಾಟ ನಡೆಸಲಿದೆಯೇ ಹೊರತು ಅವರ ಭವಿಷ್ಯದ ದೃಷ್ಟಿಯಿಂದ ಯಾವುದೇ ಲಾಭವಾಗದು. ಇದು ದುರುದ್ದೇಶಪೂರಿತ ಯೋಜನೆಯಾಗಿದೆ. ದೇಶದ ಭದ್ರತೆಗೆ ಈಗಿರುವ ಸಮಸ್ಯೆಗಳ ಜೊತೆಗೆ ಇನ್ನಷ್ಟು ಸಮಸ್ಯೆಗಳನ್ನು ಇದು ಸೃಷ್ಟಿಸಲಿದೆ ಎಂದು ಟೀಕಿಸಿದರು.
ಪ್ರಧಾನಿ ಮೋದಿಯವರ ಅವೈಜ್ಞಾನಿಕ ಕೃಷಿ ನೀತಿಯಿಂದಾಗಿ ರೈತರು ಹೋರಾಟಕ್ಕಿಳಿಯಬೇಕಾಯಿತು. ದೆಹಲಿಯಲ್ಲಿ ಇದರಿಂದಾಗಿ 700 ಮಂದಿ ರೈತರು ಪ್ರಾಣ ಕಳೆದುಕೊಂಡರು. ಆದರೆ ಇದು ದೇಶದ ಯುವಕರ ವಿಚಾರದಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದವರು ತಿಳಿಸಿದರು.